ADVERTISEMENT

ಕೋವಿಡ್‌ | ಮೂರು ತಿಂಗಳಲ್ಲಿ ಮೊದಲ ಬಾರಿಗೆ 1ರ ಗಡಿ ದಾಟಿದ ಹರಡುವಿಕೆ ಪ್ರಮಾಣ

ಪ್ರಕರಣಗಳ ಸಂಖ್ಯೆ ಏರಿಕೆಯ ಸೂಚನೆ: ಎಚ್ಚರಿಕೆ

ಪಿಟಿಐ
Published 21 ಏಪ್ರಿಲ್ 2022, 3:20 IST
Last Updated 21 ಏಪ್ರಿಲ್ 2022, 3:20 IST
   

ನವದೆಹಲಿ: ದೇಶದಲ್ಲಿ ಕೋವಿಡ್‌ ಹರಡುವಿಕೆಯನ್ನು ಸೂಚಿಸುವ ಆರ್‌–ಸಂಖ್ಯೆ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ 1ರ ಗಡಿಯನ್ನು ದಾಟಿದೆ ಎಂದು ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್‌ನ (ಐಎಂಎಸ್‌) ತಜ್ಞರು ಹೇಳಿದ್ದಾರೆ. ಒಬ್ಬ ಸೋಂಕಿತ ವ್ಯಕ್ತಿಯು ಎಷ್ಟು ಮಂದಿಗೆ ಸೋಂಕು ಹರಡುತ್ತಿದ್ದಾನೆ ಎಂಬುದನ್ನು ಈ ಸಂಖ್ಯೆ ಸೂಚಿಸುತ್ತದೆ. ಈ ಸಂಖ್ಯೆ ಹೆಚ್ಚಾದಷ್ಟು ಸೋಂಕು ಹರಡುವ ವೇಗ ಹೆಚ್ಚಾಗುತ್ತದೆ.

‘ಕೆಲವು ವಾರಗಳಿಂದ ದೇಶದ ಆರ್‌–ಸಂಖ್ಯೆ ಸತತವಾಗಿ ಏರಿಕೆಯಾಗುತ್ತಿದೆ. ಏಪ್ರಿಲ್‌ 12–18ರ ನಡುವೆ ಇದು 1.07ಕ್ಕೆ ತಲುಪಿದೆ. ಏಪ್ರಿಲ್‌ 5–11ರ ನಡುವೆ ಈ ಸಂಖ್ಯೆ 0.93ರಷ್ಟು ಇತ್ತು. ಜನವರಿ 16–22ರ ನಡುವೆ ಆರ್–ಸಂಖ್ಯೆ 1.28ರಷ್ಟು ಇತ್ತು. ಆನಂತರ ಇದೇ ಮೊದಲ ಬಾರಿಗೆ ಅದು 1ರ ಗಡಿ ದಾಟಿದೆ’ ಎಂದು ಐಎಂಎಸ್‌ನ ಸಿತಾಭ್ರ ಸಿನ್ಹಾ ವಿವರಿಸಿದ್ದಾರೆ.

‘ದೇಶದಾದ್ಯಂತ ಒಟ್ಟು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಉತ್ತರದಲ್ಲಿ ಒಂದು ಕ್ಲಸ್ಟರ್‌ (ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ) ಮತ್ತು ದಕ್ಷಿಣದಲ್ಲಿ ಒಂದು ಕ್ಲಸ್ಟರ್‌ನಲ್ಲಿ (ಕರ್ನಾಟಕ) ಪತ್ತೆಯಾಗುತ್ತಿರುವ ಪ್ರಕರಣ ಕಾರಣ, ದೇಶದಲ್ಲಿನ ಒಟ್ಟು ಪ್ರಕರಣಗಳು ಏರಿಕೆಯಾಗುತ್ತಿವೆ. ಏಪ್ರಿಲ್‌ 12–18ರ ವಾರದಲ್ಲಿ, ದೆಹಲಿಯಲ್ಲಿ ಆರ್‌–ಸಂಖ್ಯೆ 2.12, ಉತ್ತರ ಪ್ರದೇಶದಲ್ಲಿ 2.12 ಮತ್ತು ಹರಿಯಾಣದಲ್ಲಿ 1.70 ಇದೆ. ಕರ್ನಾಟಕದಲ್ಲಿ ಆರ್‌–ಸಂಖ್ಯೆ 1ರ ಗಡಿ ದಾಟಿದೆ’ ಎಂದು ಅವರು ವಿವರಿಸಿದ್ದಾರೆ.

ADVERTISEMENT

‘ಇದೇ ಅವಧಿಯಲ್ಲಿಮುಂಬೈನಲ್ಲಿ ಆರ್‌–ಸಂಖ್ಯೆ 1.13, ಚೆನ್ನೈನಲ್ಲಿ 1.18 ಮತ್ತು ಬೆಂಗಳೂರಿನಲ್ಲಿ 1.04ರಷ್ಟು ಇತ್ತು. ಇಡೀ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಗೋಚರವಾಗದೇ ಇದ್ದರೂ, ನಗರಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಇದು ಸೂಚಿಸುತ್ತದೆ’ ಎಂದು ಅವರು ವಿವರಿಸಿದ್ದಾರೆ.

‘2021ರಲ್ಲಿ ಕೋವಿಡ್‌ ಎರಡನೇ ಅಲೆ ಆರಂಭವಾಗುವುದಕ್ಕೂ ಮುನ್ನ ಫೆಬ್ರುವರಿ 14ರಿಂದ ಮಾರ್ಚ್‌ 11ರ ನಡುವೆ ದೇಶದ ಆರ್‌–ಸಂಖ್ಯೆ 1.08ರಷ್ಟು ಇತ್ತು. ಈಗಿನ ಆರ್‌–ಸಂಖ್ಯೆ ಸಹ ಸರಿಸುಮಾರು ಇಷ್ಟೇ ಪ್ರಮಾಣದಲ್ಲಿ ಇದೆ. ಎರಡನೇ ಅಲೆ ಉತ್ತುಂಗದಲ್ಲಿ (ಮಾರ್ಚ್‌ 9ರಿಂದ ಏಪ್ರಿಲ್‌ 21ರ ನಡುವೆ) ಇದ್ದಾಗ ಅದು 1.37ರಷ್ಟಾಗಿತ್ತು. ಏಪ್ರಿಲ್‌ 29ರಿಂದ ಮೇ 7ರ ನಡುವೆ 1.10ಕ್ಕೆ ಇಳಿಕೆಯಾಗಿತ್ತು. ನಂತರ ಮೇ 9ರ ವೇಳೆಗೆ 0.98ಕ್ಕೆ ಇಳಿಕೆಯಾಗಿತ್ತು.’ ಎಂದು ಅವರು ವಿವರಿಸಿದ್ದಾರೆ.

*

ಮಾಸ್ಕ್‌ ಧರಿಸುವುದನ್ನು, ಕೈ ತೊಳೆಯುವುದನ್ನು ಮತ್ತು ಮುಖ–ಕಣ್ಣುಗಳನ್ನು ಮುಟ್ಟಿಕೊಳ್ಳದೇ ಇರುವುದನ್ನು ಮರುರೂಢಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.
-ಸಿತಾಭ್ರ ಸಿನ್ಹಾ, ಐಎಂಎಸ್‌ ಗಣಿತ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.