ADVERTISEMENT

ಭಾರತದ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ ದ್ವಿಗುಣ: ಪ್ರಲ್ಹಾದ ಜೋಶಿ

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಪಿಟಿಐ
Published 17 ಡಿಸೆಂಬರ್ 2024, 12:44 IST
Last Updated 17 ಡಿಸೆಂಬರ್ 2024, 12:44 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ನವದೆಹಲಿ: ‘ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವು ದ್ವಿಗುಣಗೊಂಡಿದೆ’ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟದಿಂದ (ಸಿಐಐ) ಮಂಗಳವಾರ ನಡೆದ ಅಂತರರಾಷ್ಟ್ರೀಯ ಇಂಧನ ಸಮ್ಮೇಳನ ಮತ್ತು ವಸ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 7.54 ಗಿಗಾ ವಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದನೆಯಾಗಿತ್ತು. ಸದ್ಯ 15 ಗಿಗಾ ವಾಟ್‌ ಉತ್ಪಾದನೆಯಾಗಿದೆ. ದೇಶದ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಒಟ್ಟು ಸಾಮರ್ಥ್ಯ 214 ಗಿಗಾ ವಾಟ್‌ಗೆ ಮುಟ್ಟಿದೆ. 2023ರ ವೇಳೆ ಇದನ್ನು 500 ಗಿಗಾ ವಾಟ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ADVERTISEMENT

2025–26ರೊಳಗೆ ಒಟ್ಟು 38 ಗಿಗಾ ವಾಟ್‌ ಸಾಮರ್ಥ್ಯದ 50 ಸೌರ ಪಾರ್ಕ್‌ಗಳ ನಿರ್ಮಾಣಕ್ಕೆ ನಿರ್ಧರಿಸಿದ್ದು, ಈ ಸಂಬಂಧ ಸಿದ್ಧತೆ ನಡೆದಿದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ಭಾರತವು ನವೀಕರಿಸಬಹುದಾದ ಇಂಧನ ವಲಯದಲ್ಲಿ ₹51,795 ಕೋಟಿ ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿದೆ ಎಂದರು.

ದೇಶೀಯ ಮಟ್ಟದಲ್ಲಿ ಸೌರ ಫಲಕ ಮತ್ತು ಮಾಡ್ಯೂಲ್‌ಗಳ ತಯಾರಿಕೆಗೆ ಉತ್ತೇಜನ ನೀಡಲು ಉತ್ಪಾದನಾ ಆಧರಿತ ಪ್ರೋತ್ಸಾಹ ಯೋಜನೆಯಡಿ ₹24 ಸಾವಿರ ಕೋಟಿ ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರವು ದೇಶದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಒತ್ತು ನೀಡಿದೆ. ಜಾಗತಿಕ ಮಟ್ಟದಲ್ಲಿ ಭಾರತವು ಮುಂಚೂಣಿ ಸ್ಥಾನ ಕಾಯ್ದುಕೊಳ್ಳಲು ಅಣಿಯಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.