ADVERTISEMENT

Covid-19 India Update: ಮತ್ತೆ ಲಕ್ಷ ದಾಟಿದ ಕೋವಿಡ್ ಪ್ರಕರಣ, 630 ಸಾವು

ಪಿಟಿಐ
Published 7 ಏಪ್ರಿಲ್ 2021, 8:07 IST
Last Updated 7 ಏಪ್ರಿಲ್ 2021, 8:07 IST
ಮಹಾರಾಷ್ಟ್ರದ ನಾಗ್ಪುರದ ಮಾರುಕಟ್ಟೆಯ ಚಿತ್ರ  – ಪಿಟಿಐ ಚಿತ್ರ
ಮಹಾರಾಷ್ಟ್ರದ ನಾಗ್ಪುರದ ಮಾರುಕಟ್ಟೆಯ ಚಿತ್ರ – ಪಿಟಿಐ ಚಿತ್ರ   

ನವದೆಹಲಿ: ದೇಶದಲ್ಲಿ ದಿನವೊಂದರ ಗರಿಷ್ಠ ಕೋವಿಡ್ ಪ್ರಕರಣಗಳು ಬುಧವಾರ ಬೆಳಿಗ್ಗೆ ವರದಿಯಾಗಿವೆ. 24 ಗಂಟೆ ಅವಧಿಯಲ್ಲಿ 1,15,736 ಹೊಸ ಪ್ರಕರಣಗಳು ದೃಢಪಟ್ಟಿದ್ದು, 630 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಒಂದೇ ದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಕಳೆದ ಮೂರು ದಿನಗಳಲ್ಲಿ ಇದು ಎರಡನೇ ಬಾರಿ ಆಗಿದೆ. ಸೋಮವಾರವೂ ಒಂದು ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದವು.

ಇದರೊಂದಿಗೆ ದೇಶದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 1.28 ಕೋಟಿ ದಾಟಿದ್ದು, ಸಾವಿನ ಸಂಖ್ಯೆ 1,66,177ಕ್ಕೆ ಏರಿಕೆಯಾಗಿದೆ.

ಕಳೆದ 28 ದಿನಗಳಲ್ಲಿ ನಿರಂತರ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಸದ್ಯ 8,43,473 ಸಕ್ರಿಯ ಪ್ರಕರಣಗಳಿವೆ. ಇದು ಒಟ್ಟು ಪ್ರಕರಣಗಳ ಶೇ 6.59ರಷ್ಟಾಗಿದೆ. ಚೇತರಿಕೆ ಪ್ರಮಾಣ ಶೇ 92.11ಕ್ಕೆ ಇಳಿಕೆಯಾಗಿದೆ.

ಫೆಬ್ರುವರಿ 12ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ ಅತಿ ಕಡಿಮೆ, ಅಂದರೆ 1,35,926 ಆಗಿತ್ತು.

ಈವರೆಗೆ 1.17 ಕೋಟಿಗೂ ಹೆಚ್ಚು ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.