ADVERTISEMENT

ಹವಾಮಾನ ಬದಲಾವಣೆ: ಸೌರ, ಪವನ ಶಕ್ತಿಗೆ ಧಕ್ಕೆ?

ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್‌ ಮೆಟಿಯೊರಾಲಜಿ ಅಧ್ಯಯನ ವರದಿ

ಪಿಟಿಐ
Published 19 ಆಗಸ್ಟ್ 2022, 14:28 IST
Last Updated 19 ಆಗಸ್ಟ್ 2022, 14:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹವಾಮಾನ ಬದಲಾವಣೆಯು ಭಾರತದಲ್ಲಿ ಸೌರ ಮತ್ತು ಪವನ ಶಕ್ತಿ ಉತ್ಪಾದನೆ ಮೇಲೆ ನಕರಾತ್ಮಕ ಪರಿಣಾಮ ಬೀರುವ ಸಂಭವ ಇದೆ ಎಂದುಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್‌ ಮೆಟಿಯೊರಾಲಜಿ (ಉಷ್ಣ ಹವಾಮಾನ) ಅಧ್ಯಯನ ವರದಿ ಹೇಳಿದೆ.

ಈಅಧ್ಯಯನ ವರದಿ ಇತ್ತೀಚೆಗೆ ಪೀರ್-ರಿವೀವ್ಡ್‌ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಹವಾಮಾನ ಬದಲಾವಣೆಯ ಸಂಬಂಧ ಇಂಟರ್‌ ಗವರ್ನಮೆಂಟಲ್‌ ಪ್ಯಾನಲ್‌ ಆನ್‌ ಕ್ಲೈಮೆಟ್ ಚೇಂಜ್‌ (ಐಪಿಸಿಸಿ) ರೂಪಿಸಿದ ಹವಾಮಾನ ವಿಶ್ಲೇಷಣೆಯ ಅತ್ಯಾಧುನಿಕ ಮಾದರಿಗಳನ್ನು ಬಳಸಿಕೊಂಡು ಸಂಶೋಧಕರು,ಭಾರತೀಯ ಉಪಖಂಡದ ನವೀಕರಿಸಬಹುದಾದ ಇಂಧನ ವಲಯದ ಪವನ ಮತ್ತು ಸೌರ ಶಕ್ತಿಯ ಮುನ್ಸೂಚನೆಯ ವಿಶ್ಲೇಷಣೆ ನಡೆಸಿದ್ದಾರೆ.

ಉತ್ತರ ಭಾರತದಲ್ಲಿ ಋತುಮಾನ ಮತ್ತು ವಾರ್ಷಿಕ ಗಾಳಿಯ ವೇಗ ಕಡಿಮೆಯಾಗುವ ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಒಡಿಶಾ ಮತ್ತು ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ದಕ್ಷಿಣ ಕರಾವಳಿಯಲ್ಲಿ ಹವಾಮಾನ ಬದಲಾವಣೆಯಿಂದ ಗಾಳಿಯ ವೇಗ ವೃದ್ಧಿಯಾಗುವ ಸಂಭವನೀಯತೆ ತೋರಿಸುತ್ತಿದೆ ಎಂದು ‘ಭಾರತದ ಮೇಲೆ ಭವಿಷ್ಯದಲ್ಲಿ ಪವನ ಮತ್ತು ಸೌರ ಸಂಭಾವ್ಯತೆ’ ಶೀರ್ಷಿಕೆಯ ಅಧ್ಯಯನ ಹೇಳಿದೆ.

ಪವನ ಸಾಮರ್ಥ್ಯ ಕುರಿತ ಪ್ರಾದೇಶಿಕ ವಿಶ್ಲೇಷಣೆಯಲ್ಲಿ, ಹೆಚ್ಚಿನ ಶಕ್ತಿ ಉತ್ಪಾದಿಸುವ ಗಾಳಿಯ ವೇಗ ಕಡಿಮೆಯಾಗಲಿದೆ. ಆದರೆ, ಕಡಿಮೆ ಶಕ್ತಿ ಉತ್ಪಾದಿಸುವ ಗಾಳಿಯ ವೇಗವು ಭವಿಷ್ಯದಲ್ಲಿ ಹೆಚ್ಚಾಗಬಹುದು ಎಂಬುದನ್ನು ಸೂಚಿಸುತ್ತಿದೆ.

ಈ ಅಧ್ಯಯನದ ಸಂಶೋಧಕರಲ್ಲಿ ಒಬ್ಬರಾದ ಪಾರ್ಥಸಾರಥಿ ಮುಖ್ಯೋಪಾಧ್ಯಾಯ, ‘ನಮ್ಮ ಉದ್ಯಮವು ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಬೇಕಾಗಿದೆ. ನಮ್ಮ ತಂತ್ರಜ್ಞಾನಗಳು ವೇಗ ಕಾಪಾಡಿಕೊಳ್ಳಬೇಕು’ ಎಂದರು.

‘ನವೀಕರಿಸಬಹುದಾದ ಇಂಧನದ ಸಾಮರ್ಥ್ಯ ಮೇಲೆ ಭಾರತ-ಗಂಗಾ ಬಯಲುಗಳಲ್ಲಿ ಹವಾಮಾನ ಬದಲಾವಣೆ ಪರಿಣಾಮ ಬೀರಬಹುದು. ಇಂತಹ ಸನ್ನಿವೇಶಗಳಿಗೆ ಸಿದ್ಧವಾಗುವುದರ ಮಹತ್ವವನ್ನು ಅಧ್ಯಯನವು ಒತ್ತಿ ಹೇಳುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.