ADVERTISEMENT

ಜ. 23ರ ವೇಳೆಗೆ ಕೋವಿಡ್ 3ನೇ ಅಲೆ ಉತ್ತುಂಗಕ್ಕೇರಲಿದೆ: ಐಐಟಿ ಕಾನ್ಪುರದ ವಿಜ್ಞಾನಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 13:59 IST
Last Updated 19 ಜನವರಿ 2022, 13:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ವಿಜ್ಞಾನಿ ಪ್ರಕಾರ, ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕದ ಮೂರನೇ ಅಲೆಯು ಜ. 23 ರಂದು ಉತ್ತುಂಗಕ್ಕೇರಬಹುದು ಮತ್ತು ದೈನಂದಿನ ಪ್ರಕರಣಗಳು ನಾಲ್ಕು ಲಕ್ಷಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ ಎಂದಿದ್ದಾರೆ.

ಕಳೆದ ಏಳು ದಿನಗಳಲ್ಲಿ ದೆಹಲಿ, ಮುಂಬೈ ಮತ್ತು ಕೋಲ್ಕತ್ತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಈಗಾಗಲೇ ಉತ್ತುಂಗಕ್ಕೇರಿದೆ ಎಂದು ಐಐಟಿ ಕಾನ್ಪುರದ ಪ್ರಾಧ್ಯಾಪಕ ಮತ್ತು ಸೂತ್ರ ಕೋವಿಡ್ ಮಾದರಿಗೆ ಸಂಬಂಧಿಸಿದ ಸಂಶೋಧಕರಲ್ಲಿ ಒಬ್ಬರಾದ ಮನೀಂದ್ರ ಅಗರವಾಲ್ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದ ಆರಂಭದಿಂದಲೂ ದೇಶದಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಪತ್ತೆಹಚ್ಚಲು ಮತ್ತು ಊಹಿಸಲು ಈ ಸೂತ್ರ ಮಾದರಿಯನ್ನು ಬಳಸಲಾಗಿದೆ.

ADVERTISEMENT

ಅಗರವಾಲ್ ಪ್ರಕಾರ, 'ಈ ವಾರ ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ಮತ್ತು ಹರಿಯಾಣದಲ್ಲಿ ಕೋವಿಡ್ ಪ್ರಕರಣಗಳು ಉತ್ತುಂಗಕ್ಕೇರಲಿವೆ. ಆದರೆ, ಆಂಧ್ರಪ್ರದೇಶ, ಅಸ್ಸಾಂ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮುಂದಿನ ವಾರ ಪ್ರಕರಣಗಳು ಗರಿಷ್ಠ ಮಟ್ಟವನ್ನು ತಲುಪಬಹುದು' ಎಂದಿದ್ದಾರೆ.

'ದಿನನಿತ್ಯದ ಪ್ರಕರಣಗಳು ಭಾರತದಲ್ಲಿ ಜನವರಿ 23 ರಂದು ಗರಿಷ್ಠ ಮಟ್ಟಕ್ಕೆ ತಲುಪಲಿವೆ ಮತ್ತು ಇವು ನಾಲ್ಕು ಲಕ್ಷಕ್ಕಿಂತ ಕಡಿಮೆ ಇರುತ್ತದೆ. ಮೆಟ್ರೋ ನಗರಗಳಾದ ದೆಹಲಿ, ಮುಂಬೈ ಮತ್ತು ಕೋಲ್ಕತ್ತದಲ್ಲಿ ಈಗಾಗಲೇ ಉತ್ತುಂಗಕ್ಕೇರಿವೆ' ಎಂದು ಅಗರವಾಲ್ ಪಿಟಿಐಗೆ ತಿಳಿಸಿದರು.

'11ನೇ ತಾರೀಖಿನವರೆಗಿನ ಅಂಕಿಅಂಶಗಳ ಪಥವು ಜ. 23 ರ ವೇಳೆಗೆ ಬದಲಾಗುವ ಮೂಲಕ ದಿನಕ್ಕೆ ಸುಮಾರು 7.2 ಲಕ್ಷ ಪ್ರಕರಣಗಳೊಂದಿಗೆ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಕೊರೊನಾ ವಾಸ್ತವ ಪಥವು ಈಗಾಗಲೇ ಗಮನಾರ್ಹವಾಗಿ ಬದಲಾಗುತ್ತಿದೆ. ಹೀಗಿದ್ದರೂ ದಿನಕ್ಕೆ 4 ಲಕ್ಷ ಪ್ರಕರಣಗಳನ್ನು ದಾಟುವ ಸಾಧ್ಯತೆಯಿಲ್ಲ' ಎಂದು ಅಗರವಾಲ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

ಜನವರಿ ಅಂತ್ಯದ ವೇಳೆಗೆ ಕೋವಿಡ್-19 ಮೂರನೇ ಅಲೆಯು ಉತ್ತುಂಗಕ್ಕೇರಲಿದೆ ಎಂದು ಅಗರವಾಲ್ ಈ ಹಿಂದೆ ಭವಿಷ್ಯ ನುಡಿದಿದ್ದರು.

'ದೇಶದಾದ್ಯಂತ ಕೋವಿಡ್ ಪಥಗಳು ಗಮನಾರ್ಹವಾಗಿ ಬದಲಾಗುತ್ತಿವೆ. ಇದಕ್ಕೆ ಪರೀಕ್ಷಾ ಕಾರ್ಯತಂತ್ರದ ಬದಲಾವಣೆಗೆ ಐಸಿಎಂಆರ್ ಮಾರ್ಗಸೂಚಿಗಳೇ ಕಾರಣ ಎಂದು ನಾನು ಮೊದಲೇ ಊಹಿಸಿದ್ದೆ. ಆದಾಗ್ಯೂ, ಅನೇಕ ಸ್ಥಳಗಳಲ್ಲಿ, ಈ ಮಾರ್ಗಸೂಚಿಗಳನ್ನು ಇನ್ನೂ ಕಾರ್ಯಗತಗೊಳಿಸಿಲ್ಲ. ಹೀಗಾಗಿ ಇವುಗಳ ಪಥ ಬದಲಾಗಿದೆ!' ಎಂದು ಅವರು ಹೇಳಿದರು.

ಅವರ ದೃಷ್ಟಿಯಲ್ಲಿ, ಭಾರತದಲ್ಲಿ ಓಮೈಕ್ರಾನ್ ನೇತೃತ್ವದ ಪ್ರಕರಣಗಳ ಪಥದಲ್ಲಿ ಬದಲಾವಣೆಗೆ ಎರಡು ಕಾರಣಗಳಿವೆ. 'ಜನಸಂಖ್ಯೆಯಲ್ಲಿ ಎರಡು ಗುಂಪುಗಳಿವೆ, ಒಂದು ಓಮೈಕ್ರಾನ್ ವಿರುದ್ಧ ಕಡಿಮೆ ರೋಗ ನಿರೋಧಕ ಶಕ್ತಿ ಇರುವುದು ಮತ್ತು ಇನ್ನು ಕೆಲವರಲ್ಲಿ ಅದು ಜಾಸ್ತಿಯಿರುವುದು. ರೂಪಾಂತರವು ಮೊದಲ ಗುಂಪಿನವರಿಗೆ ಮೊದಲ ಬಾರಿಗೆ ಹರಡಿತು, ಇದು ತೀವ್ರ ಏರಿಕೆಗೆ ಕಾರಣವಾಗುತ್ತದೆ. ಈಗ ಮೊದಲ ಗುಂಪು ದಣಿದಿದೆ ಮತ್ತು ಆದ್ದರಿಂದ ಹರಡುವಿಕೆ ನಿಧಾನವಾಗಿದೆ' ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.