ADVERTISEMENT

ಅರ್ನಬ್ ಜತೆ ಕ್ಯಾತೆ: ಕುನಾಲ್ ಕಾಮ್ರಾಗೆ ಇಂಡಿಗೊ, ಏರ್ ಇಂಡಿಯಾ 6 ತಿಂಗಳ ನಿರ್ಬಂಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜನವರಿ 2020, 4:54 IST
Last Updated 29 ಜನವರಿ 2020, 4:54 IST
ಕುನಾಲ್ ಕಾಮ್ರಾ
ಕುನಾಲ್ ಕಾಮ್ರಾ   

ನವದೆಹಲಿ:ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಪ್ರಯಾಣದ ವೇಳೆ ಕಿರಿಕಿರಿ ಉಂಟುಮಾಡಿದಆರೋಪದಲ್ಲಿ ಕಾಮಿಡಿಯನ್ಕುನಾಲ್ ಕಾಮ್ರಾಗೆ ಇಂಡಿಗೊ ಮತ್ತು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಗಳು ಆರು ತಿಂಗಳ ನಿರ್ಬಂಧ ವಿಧಿಸಿವೆ.

‘ಮುಂಬೈನಿಂದ ಲಖನೌಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಇತ್ತೀಚೆಗೆ ನಡೆದ ಘಟನೆ ಹಿನ್ನೆಲೆಯಲ್ಲಿಕುನಾಲ್ ಕಾಮ್ರಾ ಅವರ ವಿಮಾನ ಪ್ರಯಾಣಕ್ಕೆ 6 ತಿಂಗಳ ಅವಧಿಗೆ ನಿರ್ಬಂಧ ಹೇರುತ್ತಿದ್ದೇವೆ. ಪ್ರಯಾಣದ ವೇಳೆ ಅವರು ತೋರಿರುವ ವರ್ತನೆ ಸ್ವೀಕಾರಾರ್ಹವಲ್ಲ’ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ನಡೆದಿದ್ದೇನು?:ಮುಂಬೈನಿಂದ ಲಖನೌಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಹ ಪ್ರಯಾಣಿಕರಾಗಿದ್ದ ಅರ್ನಬ್ ಗೋಸ್ವಾಮಿ ಬಳಿ ಕಾಮ್ರಾ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆದರೆ, ಅರ್ನಬ್ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ಇಯರ್‌ಫೋನ್‌ ಹಾಕಿಕೊಂಡು ಮೌನವಾಗಿ ಕುಳಿತಿದ್ದರು. ಆದರೆ, ಕಾಮ್ರಾ ಮತ್ತಷ್ಟು ಪ್ರಶ್ನೆಗಳನ್ನು ಕೇಳಿದ್ದರು.ಈ ದೃಶ್ಯವನ್ನು ವಿಡಿಯೊ ಮಾಡಿದ್ದ ಕಾಮ್ರಾ ಟ್ವೀಟ್ ಕೂಡ ಮಾಡಿದ್ದರು. ಅದು ವೈರಲ್ ಆಗಿತ್ತು.

ADVERTISEMENT

ನಿರ್ಬಂಧಕ್ಕೆ ವ್ಯಂಗ್ಯ:ತಮ್ಮ ಮೇಲೆ ಇಂಡಿಗೊ ವಿಧಿಸಿರುವ ನಿರ್ಬಂಧವನ್ನು ವ್ಯಂಗ್ಯ ಮಾಡಿದ್ದ ಕಾಮ್ರಾ, ‘ಆರು ತಿಂಗಳ ಕಾಲ ಅಮಾನತು ಮಾಡಿದ್ದಕ್ಕೆ ಧನ್ಯವಾದಗಳು ಇಂಡಿಗೊ... ಮೋದಿ ಜೀ ಅವರು ಏರ್ ಇಂಡಿಯಾವನ್ನು ಶಾಶ್ವತವಾಗಿ ಅಮಾನತುಗೊಳಿಸುತ್ತಿರಬಹುದು’ ಎಂದು ಟ್ವೀಟ್ ಮಾಡಿದ್ದಾರೆ.

ಇದರ ಬೆನ್ನಲ್ಲೇ ಏರ್ ಇಂಡಿಯಾ ಸಹ ಕಾಮ್ರಾ ಮೇಲೆ ನಿರ್ಬಂಧ ವಿಧಿಸಿದೆ.

‘ವಿಮಾನ ಪ್ರಯಾಣದ ಸಂದರ್ಭದಲ್ಲಿ ಪ್ರಚೋದನಾಕಾರಿಯಾಗಿ ನಡೆದುಕೊಳ್ಳುವುದರಿಂದ ಪ್ರಯಾಣಿಕರ ಸುರಕ್ಷತೆಗೆ ಅಪಾಯವಿದೆ. ಇಂತಹ ವರ್ತನೆಯನ್ನು ಸಹಿಸಲಾಗದು’ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.