ನವದೆಹಲಿ/ಮುಂಬೈ: ದೆಹಲಿಯಿಂದ ಶ್ರೀನಗರಕ್ಕೆ ಬುಧವಾರ ತೆರಳುತ್ತಿದ್ದ ಇಂಡಿಗೊ ವಿಮಾನಕ್ಕೆ ದಿಢೀರನೇ ಎದುರಾದ ‘ಟರ್ಬ್ಯುಲೆನ್ಸ್’ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಪ್ರಕ್ಷುಬ್ಧತೆ) ಸ್ಥಿತಿಯನ್ನು ತಪ್ಪಿಸಲು ಪೈಲಟ್, ಪಾಕಿಸ್ತಾನದ ವಾಯುಪ್ರದೇಶವನ್ನು ಅಲ್ಪಾವಧಿಗೆ ಬಳಸಲು ಲಾಹೋರ್‌ನ ವಾಯು ಸಂಚಾರ ನಿಯಂತ್ರಣದ ಅನುಮತಿ ಕೋರಿದ್ದರು. ಆದರೆ ಪೈಲಟ್‌ನ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತು ಎಂದು ಮೂಲಗಳು ಗುರುವಾರ ತಿಳಿಸಿವೆ.
ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಐವರು ಸಂಸದರು ಸೇರಿದಂತೆ 227 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ದಿಢೀರನೇ ಭಾರೀ ಪ್ರಮಾಣದ ಆಲಿಕಲ್ಲು ಮಳೆ ಎದುರಾಗಿದ್ದರಿಂದ ‘ಟರ್ಬ್ಯುಲೆನ್ಸ್’ಗೆ ಸಿಲುಕಿದ ವಿಮಾನವು ಅಲುಗಾಡಿತ್ತು. ಇದರಿಂದ ಪ್ರಯಾಣಿಕರು ತೀವ್ರ ಅತಂಕಕ್ಕೆ ಒಳಗಾಗಿದ್ದರು. ಬಳಿಕ ಪೈಲಟ್, ಶ್ರೀನಗರ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣಕ್ಕೆ ತುರ್ತು ಪರಿಸ್ಥಿತಿಯ ವರದಿ ಮಾಡಿ, ಸುರಕ್ಷಿತವಾಗಿ ವಿಮಾನವನ್ನು ಇಳಿಸಿದ್ದರು.
‘ವಿಮಾನವು ಅಮೃತಸರದ ಮೇಲೆ ಹಾರುತ್ತಿದ್ದಾಗ ಪೈಲಟ್ ಟರ್ಬ್ಯುಲೆನ್ಸ್ ಅನ್ನು ಗಮನಿಸಿ, ಪಾಕಿಸ್ತಾನದ ವಾಯು ಪ್ರದೇಶದ ಮೂಲಕ ಚಲಿಸಲು ಲಾಹೋರ್ ವಾಯು ಸಂಚಾರ ನಿಯಂತ್ರಣದ (ಎಟಿಸಿ) ಅನುಮತಿ ಕೋರಿದ್ದರು. ಆದರೆ ಲಾಹೋರ್ ಎಟಿಸಿ ಈ ಮನವಿಯನ್ನು ತಿರಸ್ಕರಿಸಿತು. ಇದರ ಪರಿಣಾಮ ವಿಮಾನವು ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿಯೇ ಮೂಲ ಹಾರಾಟದ ಮಾರ್ಗದಲ್ಲಿ ಸಂಚರಿಸಿತು’ ಎಂದು ಮೂಲಗಳು ಹೇಳಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದೆ. ಇದರ ಪರಿಣಾಮ ಪಾಕಿಸ್ತಾನ ಮತ್ತು ಭಾರತ ದೇಶಗಳು ಪರಸ್ಪರರ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯು ಪ್ರದೇಶವನ್ನು ಮುಚ್ಚಿವೆ.
ಟಿಎಂಸಿ ಸದಸ್ಯರಾದ ಡೆರೆಕ್ ಒಬ್ರಯಾನ್, ನದಿಮುಲ್ ಹಕ್, ಸಾಗರಿಕಾ ಘೋಷ್, ಮನಸ್ ಭುನಿಯಾ, ಮಮತಾ ಠಾಕೂರ್ ಅವರನ್ನು ಒಳಗೊಂಡ ಐವರು ಸದಸ್ಯರ ನಿಯೋಗವೂ ವಿಮಾನದಲ್ಲಿತ್ತು.
‘ಸಾವಿನ ಸಮೀಪಕ್ಕೆ ಹೋದ ಅನುಭವ ನಮಗಾಗಿತ್ತು. ನನ್ನ ಜೀವನ ಮುಗಿದೇ ಹೋಯಿತು ಎಂದು ಭಾವಿಸಿದ್ದೆ. ವಿಮಾನದಲ್ಲಿದ್ದ ಜನರು ಕಿರುಚುತ್ತಿದ್ದರು, ಹಲವರು ಭಯದಿಂದ ಪ್ರಾರ್ಥಿಸುತ್ತಿದ್ದರು. ನಮ್ಮನ್ನು ಸುರಕ್ಷಿತವಾಗಿ ಧರೆಗಿಳಿಸಿದ ಪೈಲಟ್‌ಗೆ ಧನ್ಯವಾದಗಳು’ ಎಂದು ಸಾಗರಿಕ ಘೋಷ್ ಪ್ರತಿಕ್ರಿಯಿಸಿದ್ದಾರೆ. ‘ವಿಮಾನದಿಂದ ಕೆಳಗಿಳಿದಾಗ, ವಿಮಾನದ ಮೂಗು ಹಾನಿಯಾಗಿದ್ದನ್ನು ನಾವು ಗಮನಿಸಿದೆವು’ ಎಂದು ಅವರು ತಿಳಿಸಿದ್ದಾರೆ.
ಇಂಡಿಗೊ ವಿಮಾನ (6ಇ2142) ತೀವ್ರ ರೀತಿಯ ‘ಟರ್ಬ್ಯುಲೆನ್ಸ್’ ಎದುರಿಸಿದ್ದರ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.