ADVERTISEMENT

ಇಂಡಿಗೋ ಪೈಲಟ್‌, ಕ್ಯಾಬಿನ್‌ ಸಿಬ್ಬಂದಿ ನಂತರ ಈಗ ತಂತ್ರಜ್ಞರ ಸಾಮೂಹಿಕ ರಜೆ!

ಐಎಎನ್ಎಸ್
Published 11 ಜುಲೈ 2022, 10:47 IST
Last Updated 11 ಜುಲೈ 2022, 10:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ಇಂಡಿಗೋ’ ಏರ್‌ಲೈನ್ಸ್‌ನ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ರಜೆ ಪಡೆದ ಬೆನ್ನಿಗೇ ಈಗ ಕೆಲವು ಕೇಂದ್ರಗಳಲ್ಲಿ ವಿಮಾನ ನಿರ್ವಹಣಾ ತಂತ್ರಜ್ಞರು ಸಾಮೂಹಿಕ ರಜೆ ತೆಗೆದುಕೊಂಡಿದ್ದಾರೆ. ಕಡಿಮೆ ವೇತನದ ವಿರುದ್ಧದ ಪ್ರತಿಭಟನಾರ್ಥವಾಗಿ ತಂತ್ರಜ್ಞರು ಸಾಮೂಹಿಕ ರಜೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

ದೆಹಲಿ ಮತ್ತು ಹೈದರಾಬಾದ್‌ನಲ್ಲಿರುವ ಇಂಡಿಗೋ ಏರ್‌ಲೈನ್ಸ್‌ನ ವಿಮಾನ ನಿರ್ವಹಣಾ ತಂತ್ರಜ್ಞರು ಜುಲೈ 8 ರಂದು ರಾತ್ರಿ ರಜೆ ತೆಗೆದುಕೊಂಡಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ಇಂಡಿಗೋ ಏರ್‌ಲೈನ್ಸ್ ವಕ್ತಾರರು ಪ್ರತಿಕ್ರಿಯೆಗೆ ಸಿಕ್ಕಿಲ್ಲ.

ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಜುಲೈ 9 ರಂದು ಇಂಡಿಗೋ ಏರ್‌ಲೈನ್ಸ್‌ನ ಕಾರ್ಯಕ್ಷಮತೆ ಶೇಕಡ 75.2ರಷ್ಟು ಇತ್ತು ಎನ್ನಲಾಗಿದೆ.

ADVERTISEMENT

‘ಇಂಡಿಗೋ’ದ ಶೇಕಡ 55ರಷ್ಟು ಪೈಲಟ್‌ಗಳು, ಕ್ಯಾಬಿನ್‌ ಸಿಬ್ಬಂದಿ ಜುಲೈ 2 ರಂದು ಅನಾರೋಗ್ಯ ರಜೆ ತೆಗೆದುಕೊಂಡಿದ್ದರಿಂದ ಸಂಸ್ಥೆಯ ವೈಮಾನಿಕ ಸೇವೆಯಲ್ಲಿ ಅಡಚಣೆ ಉಂಟಾಗಿತ್ತು. ಬಹುತೇಕ ವಿಮಾನಗಳು ವಿಳಂಬವಾಗಿದ್ದವು. ರಜೆ ಪಡೆದ ಬಹುತೇಕರು ‘ಏರ್ ಇಂಡಿಯಾ’ದ ನೇಮಕಾತಿ ಪ್ರಕ್ರಿಯೆಗೆ ಹಾಜರಾಗಿದ್ದರು ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕೆ ಕಳೆದ ಶನಿವಾರ ಮಧುರೈ– ಚೆನ್ನೈ ನಡುವಿನ ಇಂಡಿಗೋ ವಿಮಾನ ತಡವಾಗಿತ್ತು. ಇದರಲ್ಲಿ ಕೇಂದ್ರ ಸಚಿವ ಕಪಿಲ್ ಮೊರಿಸ್ವಾ ಸಿಲುಕಿಕೊಂಡಿದ್ದರು. ನಂತರ ಅವರನ್ನು ‘ಇಂಡಿಗೋ’ ಏರ್‌ಲೈನ್ಸ್ ವಿಮಾನದಲ್ಲಿ ಮುಂಬೈಗೆ ಕರೆದೊಯ್ಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.