ADVERTISEMENT

ಆಕೆಯನ್ನು ನಿರ್ಭಯಾ ಅತ್ಯಾಚಾರಿಗಳ ಕೊಠಡಿಯಲ್ಲಿ ನಾಲ್ಕು ದಿನ ಇಡಬೇಕು: ಕಂಗನಾ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 6:26 IST
Last Updated 23 ಜನವರಿ 2020, 6:26 IST
   

ಮುಂಬೈ: ದೆಹಲಿ ಗ್ಯಾಂಗ್‌ರೇಪ್‌ ಅಪರಾಧಿಗಳನ್ನು ನಿರ್ಭಯಾಳ ತಾಯಿ ಕ್ಷಮಿಸಬೇಕು ಎಂಬ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರ ಹೇಳಿಕೆಗೆ ಬಾಲಿವುಡ್‌ ನಟಿ ಕಂಗನಾ ರನೋಟ್‌ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

‘ರಾಜೀವ್‌ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ನಳಿನಿಯನ್ನು ಸೋನಿಯಾ ಗಾಂಧಿ ಕ್ಷಮಿಸಿದ್ದಾರೆ. ಇದರಿಂದ ನಳಿನಿ ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ ಅನುಭವಿಸುವಂತೆ ಆಯಿತು. ಇದೇ ಮಾದರಿಯನ್ನು ಅನುಸರಿಸಿ ಅಪರಾಧಿಗಳನ್ನು ನಿರ್ಭಯಾಳ ತಾಯಿ ಕ್ಷಮಿಸಬೇಕು’ ಎಂದು ಇಂದಿರಾ ಜೈಸಿಂಗ್‌ ಎಂಬ ಹಿರಿಯ ವಕೀಲೆಕಳೆದ ಶುಕ್ರವಾರ ಟ್ವೀಟ್‌ ಮಾಡಿದ್ದರು.

ಈ ಕುರಿತ ಪ್ರಶ್ನೆಗೆ ಕಾರ್ಯಕ್ರಮದಲ್ಲಿಉತ್ತರಿಸಿರುವ ಕಂಗನಾ, ‘ಆ ಮಹಿಳೆಯನ್ನು ನಿರ್ಭಯಾ ಅತ್ಯಾಚಾರಿಗಳಿರುವ ಜೈಲಿನ ಕೊಠಡಿಯಲ್ಲಿ ನಾಲ್ಕು ದಿನಇರಿಸಬೇಕು. ಇಂಥ ಮಹಿಳೆಯರೇ ದೆಹಲಿ ಗ್ಯಾಂಗ್‌ ರೇಪ್‌ನಂಥ ಅತ್ಯಾಚಾರಿಗಳನ್ನು, ಹಂತಕರನ್ನು ಹಡೆಯಲು ಸಾಧ್ಯ ಎಂದು’ ಎಂದು ಅವರು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಇಂದಿರಾ ಜೈಸಿಂಗ್‌ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ನಿರ್ಭಯಾ ತಾಯಿ, ‘ನನಗೆ ಈ ರೀತಿ ಸಲಹೆ ನೀಡಲು ಇಂದಿರಾ ಜೈಸಿಂಗ್‌ ಅವರಿಗೆ ಎಷ್ಟು ಧೈರ್ಯ’ ಎಂದು ಪ್ರಶ್ನಿಸಿದ್ದರು.

‘ಸುಪ್ರೀಂಕೋರ್ಟ್‌ನಲ್ಲಿ ಇಂದಿರಾ ಅವರನ್ನು ಸಾಕಷ್ಟು ಸಲ ನಾನು ಭೇಟಿಯಾಗಿದ್ದೇನೆ. ಅವರು ಒಮ್ಮೆಯೂ ನನ್ನ ಯೋಗಕ್ಷೇಮವನ್ನು ವಿಚಾರಿಸಿಲ್ಲ. ಆದರೆ, ಈಗ ಏಕಾಏಕಿ ಅಪರಾಧಿಗಳ ಪರ ವಕಾಲತ್ತು ವಹಿಸಿ, ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

‘ಅತ್ಯಾಚಾರ ಮಾಡಿದವರನ್ನು ಬೆಂಬಲಿಸುವ ಮೂಲಕವೇ ಇಂಥವರು ಬದುಕು ಕಟ್ಟಿಕೊಳ್ಳುತ್ತಾರೆ. ಹೀಗಾಗಿ, ಅತ್ಯಾಚಾರದಂತಹ ಘಟನೆಗಳು ಕಡಿಮೆಯಾಗುತ್ತಿಲ್ಲ’ ಎಂದೂ ಹೇಳಿದ್ದರು.

‘ನನಗೆ ಸಲಹೆ ನೀಡಲು ಇಂದಿರಾ ಜೈಸಿಂಗ್‌ ಯಾರು? ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಇಡೀ ದೇಶವೇ ಬಯಸುತ್ತಿದೆ. ಇಂತಹ ವ್ಯಕ್ತಿಗಳಿಂದಾಗಿ ಅತ್ಯಾಚಾರ ಸಂತ್ರಸ್ತರಿಗೆ, ಅವರ ಕುಟುಂಬದವರಿಗೆ ನ್ಯಾಯ ಮರೀಚಿಕೆಯಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೇ ವಿಚಾರವಾಗಿ ಇಂದಿರಾ ಜೈಸಿಂಗ್‌ ಅವರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.