ಇಂದೋರ್: ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಮಧ್ಯಪ್ರದೇಶದ 52 ವರ್ಷದ ಅವಿವಾಹಿತ ಶಿಕ್ಷಕಿಯೊಬ್ಬರು ದಯಾಮರಣಕ್ಕೆ ಅವಕಾಶ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದ್ದಾರೆ.
ಇದರ ಬೆನ್ನಲ್ಲೇ, ಸ್ಥಳೀಯಾಡಳಿತವು ಅವರ ಬೇಡಿಕೆಯನ್ನು ತಡೆಯಲು ಯತ್ನಿಸುತ್ತಿದ್ದು, ಶಿಕ್ಷಕಿ ಮಾತ್ರ ತಮ್ಮ ಬೇಡಿಕೆಯಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ.
ಇಲ್ಲಿನ ಜಬ್ರಾನ್ ಕಾಲೊನಿಯ ಸಮುದಾಯ ಕಟ್ಟಡದಲ್ಲಿರುವ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ ಚಂದ್ರಕಾಂತ ಜೇಠಾನಿ ಅವರು ಆನುವಂಶಿಕ ಮೂಳೆಗಳ ದೌರ್ಬಲ್ಯ ಹಾಗೂ ಅಸ್ವಸ್ಥತೆಯಿಂದಾಗಿ ತೀವ್ರ ಬೆನ್ನುನೋವು ಅನುಭವಿಸುತ್ತಿದ್ದಾರೆ.
‘ಈಗಾಗಲೇ ನನ್ನ ಕಣ್ಣು ಹಾಗೂ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲು ಒಪ್ಪಿಗೆ ನೀಡಿದ್ದು, ನಾನು ಸತ್ತ ಬಳಿಕ ನಾನು ಅನುಭವಿಸಿದ ಕಾಯಿಲೆ ಕುರಿತಂತೆ ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನ ನಡೆಸಲಿದ್ದಾರೆ. ಹೀಗಾಗಿ, ದಯಾಮರಣ ನೀಡುವಂತೆ ಕೋರಿ ರಾಷ್ಟ್ರಪತಿ ಅವರಿಗೆ ಮಾಧ್ಯಮಗಳ ಮೂಲಕ ಮನವಿ ಸಲ್ಲಿಸಿದ್ದೇನೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.