ADVERTISEMENT

‘ಅಗ್ನಿಪಥ’ಕ್ಕೆ ಉದ್ಯಮ ವಲಯದ ಬೆಂಬಲ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 17:20 IST
Last Updated 20 ಜೂನ್ 2022, 17:20 IST
ಆನಂದ್‌ ಮಹೀಂದ್ರ
ಆನಂದ್‌ ಮಹೀಂದ್ರ    

ನವದೆಹಲಿ: ಅಗ್ನಿಪಥ ಯೋಜನೆಗೆ ಉದ್ಯಮ ವಲಯದಿಂದ ಬೆಂಬಲ ವ್ಯಕ್ತವಾಗಿದೆ. ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌, ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್‌ ಮಹೀಂದ್ರಾ, ಆರ್‌ಪಿಜಿ ಎಂಟರ್‌ಪ್ರೈಸಸ್‌ ಅಧ್ಯಕ್ಷ ಹರ್ಷ ಗೋಯೆಂಕಾ ಮತ್ತು ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಅವರು ಯೋಜನೆಗೆ ಬೆಂಬಲ ಸೂಚಿಸಿದ್ದಾರೆ. ನಾಲ್ಕು ವರ್ಷದ ಕರ್ತವ್ಯ ಪೂರೈಸಿ ಬರುವ ‘ಅಗ್ನಿವೀರ’ರಿಗೆ ಉದ್ಯಮ ವಲಯದಲ್ಲಿ ಉದ್ಯೋಗದ ಅವಕಾಶ ವ್ಯಾಪಕವಾಗಿದೆ ಎಂದು ಅವರು ಹೇಳಿದ್ದಾರೆ.

ಅಗ್ನಿಪಥ ಯೋಜನೆಯು ಯುವಜನರಿಗೆ ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡುವ ಅವಕಾಶ ಒದಗಿಸುತ್ತದೆ. ಜತೆಗೆ, ಶಿಸ್ತಿನ ಹಾಗೂ ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಉದ್ಯಮ ವಲಯಕ್ಕೆ ಒದಗಿಸಲಿದೆ ಎಂದು ಚಂದ್ರಶೇಖರನ್‌ ಹೇಳಿದ್ದಾರೆ.

ಅಗ್ನಿಪಥದ ವಿರುದ್ಧದ ಪ್ರತಿಭಟನೆಯು ಹಿಂಸೆಗೆ ತಿರುಗಿರುವುದರ ಕುರಿತು ಮಹೀಂದ್ರಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಾಯಕತ್ವ ಕೌಶಲ, ತಂಡಸ್ಫೂರ್ತಿ ಮತ್ತು ದೈಹಿಕ ತರಬೇತಿಯೊಂದಿಗೆ ಹಿಂದಿರುಗುವ ಅಗ್ನಿವೀರರು ಉದ್ಯಮಕ್ಕೆ ಸನ್ನದ್ಧ ಕೆಲಸಗಾರರಾಗಿ ದೊರೆಯುತ್ತಾರೆ. ಕಾರ್ಯಾಚರಣೆ, ಆಡಳಿತ, ಪೂರೈಕೆ ಸರಪಣಿ ನಿರ್ವಹಣೆಯಂತಹ ಕೆಲಸಗಳಿಗೆ ಅವರು ಅರ್ಹರಾಗಬಹುದು’ ಎಂದು
ಮಹೀಂದ್ರಾ ಅವರು ಹೇಳಿದ್ದಾರೆ. ಅಗ್ನಿವೀರರಿಗೆ ಯಾವ ಕೆಲಸ
ನೀಡುತ್ತೀರಿ ಎಂದು ಟ್ವಿಟರ್‌ನಲ್ಲಿ ಕೇಳಿದ ಪ್ರಶ್ನೆಗೆ ಅವರು ಹೀಗೆ
ಉತ್ತರಿಸಿದ್ದಾರೆ.

‘ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವ ಅವಕಾಶವನ್ನು ಆರ್‌ಪಿಜಿ ಸಮೂಹ ಕೂಡ ಸ್ವಾಗತಿಸುತ್ತದೆ’ ಎಂದು ಮಹೀಂದ್ರಾ ಅವರ ಟ್ವೀಟ್‌ಗೆ ಹರ್ಷ ಗೋಯೆಂಕಾ ಪ್ರತಿಕ್ರಿಯೆ ನೀಡಿದ್ದಾರೆ.

‘ಉದ್ಯಮ ವಲಯದ ನೇಮಕಾತಿಯಲ್ಲಿ ಅಗ್ನಿವೀರರಿಗೆ ವಿಶಿಷ್ಟವಾದ ಅನುಕೂಲಗಳು ದೊರೆಯಲಿವೆ ಎಂದು ದೃಢವಾಗಿ ನಂಬಿದ್ದೇನೆ’ ಎಂದು ಮಜುಂದಾರ್ ಷಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.