ADVERTISEMENT

ಹಣದುಬ್ಬರ ಹೆಚ್ಚಳ, ಕೈಗಾರಿಕಾ ಉತ್ಪಾದನೆ ಶೇ 1.4ಕ್ಕೆ ಇಳಿಕೆ

ಪಿಟಿಐ
Published 12 ಜನವರಿ 2022, 19:31 IST
Last Updated 12 ಜನವರಿ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಡಿಸೆಂಬರ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ದರವು ಆರು ತಿಂಗಳ ಗರಿಷ್ಠ ಮಟ್ಟವಾದ ಶೇಕಡ 5.59ಕ್ಕೆ ತಲುಪಿದೆ. ಆಹಾರ ವಸ್ತುಗಳು, ಇಂಧನದ ಬೆಲೆ ಹೆಚ್ಚಳ ಆಗಿದ್ದು ಇದಕ್ಕೆ ಒಂದು ಕಾರಣ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ದರವು ನವೆಂಬರ್‌ನಲ್ಲಿ ಶೇ 4.91ರಷ್ಟು ಇತ್ತು. 2020ರ ಡಿಸೆಂಬರ್‌ನಲ್ಲಿ ಇದು ಶೇ 4.59ರಷ್ಟು ಆಗಿತ್ತು. 2021ರ ಅಕ್ಟೋಬರ್‌ ನಂತರದಲ್ಲಿ ಚಿಲ್ಲರೆ ಹಣದುಬ್ಬರ ದರವು ಹೆಚ್ಚಳ ಆಗುತ್ತಿದೆ.

ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ಚಿಲ್ಲರೆ ಹಣದುಬ್ಬರ ದರವನ್ನು ಶೇಕಡ 4ಕ್ಕೆ ಮಿತಿಗೊಳಿಸಬೇಕು ಎಂಬ ಗುರಿ ನೀಡಿದೆ. ಆದರೆ, ಚಿಲ್ಲರೆ ಹಣದುಬ್ಬರ ದರವು ಶೇ 4 ಕ್ಕಿಂತ ಎರಡು ಅಂಶಗಳಷ್ಟು ಹೆಚ್ಚಾಗಲು (ಶೇ 6ಕ್ಕೆ ತಲುಪಲು) ಅಥವಾ ಕಡಿಮೆ ಆಗಲು (ಶೇ 2ಕ್ಕೆ ಇಳಿಯಲು) ಅವಕಾಶ ಇದೆ.

ADVERTISEMENT

ಡಿಸೆಂಬರ್‌ನಲ್ಲಿ ದಾಖಲಾಗಿರುವ ಚಿಲ್ಲರೆ ಹಣದುಬ್ಬರ ದರವು ಗರಿಷ್ಠ ಮಟ್ಟಕ್ಕೆ (ಶೇ 6) ಸನಿಹದಲ್ಲಿದೆ. ಹೀಗಿದ್ದರೂ, ಓಮೈಕ್ರಾನ್ ಸೃಷ್ಟಿಸಿರುವ ಅಸ್ಥಿರ ವಾತಾವರಣದ ಕಾರಣದಿಂದಾಗಿ ಆರ್‌ಬಿಐ ಹಣದುಬ್ಬರ ನಿಯಂತ್ರಣಕ್ಕಿಂತಲೂ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುವ, ಹಣಕಾಸಿನ ನೀತಿಯಲ್ಲಿ ಬದಲಾವಣೆ ಮಾಡದೆ ಇರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಹಾರ ಮತ್ತು ಪಾನೀಯದ ಜೊತೆಗೆ ಬಟ್ಟೆ ಹಾಗೂ ಪಾದರಕ್ಷೆಗಳ ಬೆಲೆಯಲ್ಲಿ ಕೂಡ ಡಿಸೆಂಬರ್‌ನಲ್ಲಿ ಏರಿಕೆ ಆಗಿದೆ.

ಹಣದುಬ್ಬರ ಕರ್ನಾಟಕದಲ್ಲಿ ಹೆಚ್ಚು

ಬೆಂಗಳೂರು: ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯವು ಬುಧವಾರ ಬಿಡುಗಡೆ ಮಾಡಿರುವ ಚಿಲ್ಲರೆ ಹಣದುಬ್ಬರ ಕುರಿತ ಅಂಕಿ–ಅಂಶಗಳಲ್ಲಿ ರಾಜ್ಯವಾರು ವಿವರಗಳು ಕೂಡ ಇವೆ. ಈ ವಿವರಗಳ ಪ್ರಕಾರ, ಕರ್ನಾಟಕದಲ್ಲಿ ಡಿಸೆಂಬರ್‌ನಲ್ಲಿನ ಹಣದುಬ್ಬರ ಪ್ರಮಾಣವು ಶೇ 6.44 ಆಗಿದೆ. ಇದು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಹಣದುಬ್ಬರ ದರವು ಶೇ 5.69ರಷ್ಟು ಆಗಿದೆ. ನಗರ ಪ್ರದೇಶಗಳಲ್ಲಿನ ಹಣದುಬ್ಬರ ದರವು ಶೇ 7.13ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.