ADVERTISEMENT

ಮಾಹಿತಿ ಆಯುಕ್ತ ಹುದ್ದೆ: ನಿವೃತ್ತ ಅಧಿಕಾರಿಗಳದ್ದೇ ಮೇಲುಗೈ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 21:26 IST
Last Updated 17 ನವೆಂಬರ್ 2020, 21:26 IST

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಮಾಹಿತಿ ಹಕ್ಕು ಆಯುಕ್ತರಾಗಿ ನೇಮಕಗೊಂಡಿರುವವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ನಿವೃತ್ತ ಸರ್ಕಾರಿ ನೌಕರರಾಗಿದ್ದಾರೆ. ಈ ಹುದ್ದೆಗೆ ಆಯ್ಕೆ ಮಾಡಲು ವಿಸ್ತೃತವಾದ ಮಾನದಂಡಗಳಿದ್ದರೂ, ಅನೇಕ ರಾಜ್ಯಗಳಲ್ಲಿ ಮಹಿಳೆಯರಿಗೆ ಈ ಹುದ್ದೆ ಈಗಲೂ ಕೈಗೆಟುಕದಂತಾಗಿದೆ.

ದೇಶಾದ್ಯಂತ ಇರುವ ಸುಮಾರು 400 ಮಾಹಿತಿ ಹಕ್ಕು ಆಯುಕ್ತರಲ್ಲಿ, ಶೇ 59ರಷ್ಟು ಮಂದಿ ನಿವೃತ್ತ ಸರ್ಕಾರಿ ನೌಕರರಾಗಿದ್ದಾರೆ. ಶೇ 17ರಷ್ಟು ಮಂದಿ ಕಾನೂನು ವೃತ್ತಿಯ ಹಿನ್ನೆಲೆ ಹೊಂದಿದವರು. ಶೇ 13ರಷ್ಟು ಮಂದಿ ವಕೀಲರು ಮತ್ತು ಶೇ 4ರಷ್ಟು ಮಂದಿ ನಿವೃತ್ತ ನ್ಯಾಯಾಧೀಶರುಗಳಿದ್ದಾರೆ. ಉಳಿದವರಲ್ಲಿ ಪತ್ರಕರ್ತರು, ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರು ಹಾಗೂ ಸಾಮಾಜಿಕ ಕಾರ್ಯಕರ್ತರು ಇದ್ದಾರೆ ಎಂದು ‘ಸತರ್ಕ ನಾಗರಿಕ ಸಂಘಟನೆ’ ನಡೆಸಿದ ವಿಶ್ಲೇಷಣೆಯಿಂದ ತಿಳಿದುಬಂದಿದೆ.

122 ಮಂದಿ ಮುಖ್ಯ ಮಾಹಿತಿ ಆಯುಕ್ತರ ವಿವರಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ, ಅವರಲ್ಲಿ ಶೇ 84ರಷ್ಟು ಮಂದಿ ನಿವೃತ್ತ ಸರ್ಕಾರಿ ಅಧಿಕಾರಿಗಳು, ಅದರಲ್ಲೂ ಶೇ 65ರಷ್ಟು ಮಂದಿ ನಿವೃತ್ತ ಐಎಎಸ್‌ ಅಧಿಕಾರಿಗಳು ಎಂಬ ವಿವರ ಬಹಿರಂಗಗೊಂಡಿದೆ.

ADVERTISEMENT

ಈವರೆಗೆ ನೇಮಕಗೊಂಡಿರುವ ಮಾಹಿತಿ ಆಯುಕ್ತರಲ್ಲಿ ಶೇ 10ರಷ್ಟು ಮಾತ್ರ ಮಹಿಳೆಯರಿದ್ದಾರೆ. ಬಿಹಾರ, ಛತ್ತೀಸಗಡ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಸೇರಿ 14 ರಾಜ್ಯಗಳಲ್ಲಿ ಒಮ್ಮೆಯೂ ಮಹಿಳೆ
ಯನ್ನು ಈ ಹುದ್ದೆಗೆ ನೇಮಕ ಮಾಡಿಲ್ಲ ಎಂದು ವಿಶ್ಲೇಷಣೆಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.