ADVERTISEMENT

ಗುಜರಾತ್‌ನಿಂದ ಮಸ್ಕತ್‌ನತ್ತ ಎಂಜಿನ್‌ ರಹಿತ ಐಎನ್‌ಎಸ್‌ ಕೌಂಡಿನ್ಯ ಚೊಚ್ಚಲ ಯಾನ

ಅಜಂತಾ ಗುಹೆಗಳ ವರ್ಣರಂಜಿತ ಕಲಾಕೃತಿಗಳ ರಂಗು

ಪಿಟಿಐ
Published 29 ಡಿಸೆಂಬರ್ 2025, 15:54 IST
Last Updated 29 ಡಿಸೆಂಬರ್ 2025, 15:54 IST
<div class="paragraphs"><p>ಐಎನ್‌ಎಸ್‌ವಿ ಕೌಂಡಿನ್ಯವು ತನ್ನ ಚೊಚ್ಚಲ ಸಮುದ್ರಯಾನವನ್ನು ಸೋಮವಾರ ಗುಜರಾತ್‌ನಿಂದ ಒಮನ್‌ನ ಮಸ್ಕತ್‌ನತ್ತ ತೆರಳಿತು</p></div>

ಐಎನ್‌ಎಸ್‌ವಿ ಕೌಂಡಿನ್ಯವು ತನ್ನ ಚೊಚ್ಚಲ ಸಮುದ್ರಯಾನವನ್ನು ಸೋಮವಾರ ಗುಜರಾತ್‌ನಿಂದ ಒಮನ್‌ನ ಮಸ್ಕತ್‌ನತ್ತ ತೆರಳಿತು

   

ಪಿಟಿಐ ಚಿತ್ರ

ನವದೆಹಲಿ: ಸಾಂಪ್ರದಾಯಿಕವಾಗಿ ನಿರ್ಮಿಸಲಾದ ‘ಐಎನ್‌ಎಸ್‌ವಿ ಕೌಂಡಿನ್ಯ’ವು ತನ್ನ ಚೊಚ್ಚಲ ಸಮುದ್ರಯಾನವನ್ನು ಗುಜರಾತ್‌ನ ಪೋರಬಂದರ್‌ನಿಂದ ಸೋಮವಾರ ಆರಂಭಿಸಿತು. ಅಜಂತಾ ಗುಹೆಗಳಲ್ಲಿದ್ದ ಪೇಟಿಂಗ್‌ನಿಂದ ಸ್ಫೂರ್ತಿ ಪಡೆದು, ಐದನೇ ಶತಮಾನದಲ್ಲಿ ಬಳಸುತ್ತಿದ್ದ ಹಡಗನ್ನು ಪುನರ್ ನಿರ್ಮಿಸಲಾಗಿದೆ.

ADVERTISEMENT

ಭಾರತದ ಮೊದಲ ನಾವಿಕರಾದ ‘ಕೌಂಡಿನ್ಯ’ ಅವರ ಹೆಸರನ್ನೇ ಈ ನೌಕೆಗೆ ಇಡಲಾಗಿದೆ. ಪುರಾತನ ಕಾಲದಲ್ಲಿ ಭಾರತದಿಂದ ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಇದೇ ಮಾದರಿಯ ಹಡಗಿನ ಮೂಲಕ ಪ್ರಯಾಣಿಸಿದ್ದ ನೆನಪಿಗಾಗಿ ಇದನ್ನು ನಿರ್ಮಿಸಲಾಗಿದ್ದು, ಸಮುದ್ರಯಾನದ ಇತಿಹಾಸದಲ್ಲಿ ಭಾರತದ ಮೈಲಿಗಲ್ಲನ್ನು ಮತ್ತೆ ನೆನಪಿಸಿದೆ.

‘ಇದರ ವಿನ್ಯಾಸ ಹಾಗೂ ನಿರ್ಮಾಣದ ವೇಳೆ ವಿಶಿಷ್ಟವಾದ ತಾಂತ್ರಿಕ ಸವಾಲುಗಳು ಎದುರಾದವು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರವಾರದ ನೌಕಾನೆಲೆಯಲ್ಲಿ ಕೇಂದ್ರ ಸಾಂಸ್ಕೃತಿಕ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವರ್ಷ ಮೇ 21ರಂದು ಅಧಿಕೃತವಾಗಿ  ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಗಿತ್ತು. 

ಸೋಮವಾರ ನಡೆದ ಚೊಚ್ಚಲ ಯಾನಕ್ಕೆ ನೌಕಾಪಡೆ ಪಶ್ಚಿಮ ಕಮಾಂಡ್‌ ಮುಖ್ಯಸ್ಥ ವೈಸ್‌ ಆಡ್ಮಿರಲ್‌ ಕೃಷ್ಣ ಸ್ವಾಮಿನಾಥನ್‌, ಭಾರತದ ಒಮನ್‌ ರಾಯಭಾರಿ ಇಸ್ಸಾ–ಸಲೇ–ಅಲ್‌ ಶಿಬಾನಿ ಅವರು ಚಾಲನೆ ನೀಡಿದರು.

‘ಈ ಯಾನವು ಭಾರತದ ಪಶ್ಚಿಮ ಕರಾವಳಿಯಿಂದ ಒಮನ್‌ಗೆ ಪ್ರಾಚೀನ ಸಮುದ್ರಮಾರ್ಗವನ್ನು ಮತ್ತೆ ನೆನಪಿಸುತ್ತದೆ. ಹಿಂದೂ ಮಹಾಸಾಗರದಲ್ಲಿ ವ್ಯಾಪಾರ, ಸಾಂಸ್ಕೃತಿಕ ವಿನಿಮಯ, ನಿರಂತರ ನಾಗರಿಕ ಸಂವಹನವನ್ನು ಮತ್ತೆ ಪುನರ್‌ ಸ್ಥಾಪಿಸಲಿದೆ’ ಎಂದು ನೌಕಾಸೇನೆಯ ವಕ್ತಾರರು ತಿಳಿಸಿದ್ದಾರೆ.

ಪುರಾತನ ತಂತ್ರಜ್ಞಾನ ಬಳಸಿಕೊಂಡು, ಈ ಹಡಗಿನ ನಿರ್ಮಾಣ ಮಾಡುವ ಸಂಬಂಧ ಕೇಂದ್ರ ಸಾಂಸ್ಕೃತಿಕ ಸಚಿವ, ಭಾರತೀಯ ನೌಕಾ ಪಡೆ ಹಾಗೂ ಹೋದಿ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ಜಂಟಿಯಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಕೇಂದ್ರ ಸಾಂಸ್ಕೃತಿಕ ಸಚಿವಾಲಯವು ಈ ಯೋಜನೆಗೆ ಅನುದಾನ ಒದಗಿಸಿತ್ತು. 

‘ಐಎನ್‌ಎಸ್‌ವಿ ಕೌಂಡಿನ್ಯದ ರಚನೆಯು ಹೊಲಿಗೆ ಆಧಾರಿತವಾಗಿದ್ದು, ಅಜಂತಾ ಗುಹೆಗಳಲ್ಲಿನ ಪೇಟಿಂಗ್‌ನಿಂದ ಸ್ಫೂರ್ತಿ ಪಡೆದುಕೊಂಡು ರಚಿಸಲಾಗಿದೆ’ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನುರಿತ ಹಡಗು ತಯಾರಕ ಬಾಬು ಶಂಕರನ್‌ ನೇತೃತ್ವದಲ್ಲಿ ಕೇರಳದ ನುರಿತ ಕುಶಲಕರ್ಮಿಗಳನ್ನು ಬಳಸಿಕೊಂಡು 2023 ಸೆಪ್ಟೆಂಬರ್‌ನಲ್ಲಿ ಹಡಗು ನಿರ್ಮಾಣ ಕಾರ್ಯ ಆರಂಭಗೊಂಡಿತು. ಹಲವಾರು ತಿಂಗಳುಗಳ ಕಾಲ ತೆಂಗಿನ ನಾರು, ತೆಂಗಿನ ಹಗ್ಗ ಹಾಗೂ ನೈಸರ್ಗಿಕ ರಾಳವನ್ನು ಬಳಸಿಕೊಂಡು ಮರದ ಹಲಗೆಗಳನ್ನು ಹೊಲಿದಿದ್ದರು. 2025ರ ಫೆಬ್ರುವರಿ ತಿಂಗಳಲ್ಲಿ ಗೋವಾದ ‘ಹೋದಿ ಶಿಪ್‌ಯಾರ್ಡ್‌’ನಲ್ಲಿ ಈ ಹಡಗಿಗೆ ಚಾಲನೆ ನೀಡಲಾಗಿತ್ತು. 

ಐಎನ್‌ಎಸ್‌ವಿ ಕೌಂಡಿನ್ಯವು ತನ್ನ ಚೊಚ್ಚಲ ಸಮುದ್ರಯಾನವನ್ನು ಸೋಮವಾರ ಗುಜರಾತ್‌ನಿಂದ ಒಮನ್‌ನ ಮಸ್ಕತ್‌ನತ್ತ ತೆರಳಿತು

ಹಡಗಿನ ವಿಶೇಷತೆ ಏನು...?

ಕೇರಳ ಕಾಡಿನ ಮರದ ಹಲಗೆಗಳು ತೆಂಗಿನ ನಾರಿನ ಹಗ್ಗಗಳನ್ನು ಬಳಸಿ ತಯಾರಾದ ನೌಕೆ ನೋಡಲು ಅತ್ಯಾಕರ್ಷಕವಿದೆ. ಅದಕ್ಕಿಂತಲೂ ಕದಂಬರ ರಾಜಲಾಂಛನ ‘ಗಂಡಭೇರುಂಡ ಪಕ್ಷಿ’ಯ ಚಿತ್ರವನ್ನೊಳಗೊಂಡ ನೌಕೆಯ ಹಾಯಿ ನೌಕೆಯ ತುತ್ತತುದಿಯಲ್ಲಿರುವ ಸಿಂಹ ಲಾಂಛನ ಮತ್ತಷ್ಟು ಗಮನಸೆಳೆಯುತ್ತವೆ. ಹಡಗಿನ ನಿರ್ಮಾಣಕ್ಕೆ ಯಾವುದೇ ಲೋಹಗಳನ್ನು ಬಳಸಿಲ್ಲ. 19.6 ಮೀಟರ್‌ ಉದ್ಧ 6.5 ಮೀಟರ್‌ ಅಗಲವನ್ನು ಹೊಂದಿದೆ. ಈ ಹಡಗು ಸಂಪೂರ್ಣವಾಗಿ ಹಾಯಿಗಳಿಂದಲೇ ನಡೆಸಲ್ಪಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.