ADVERTISEMENT

ವಾಯುಪಡೆ ವಿಮಾನ ಮೋದಿಯ ಟ್ಯಾಕ್ಸಿ: ಕಾಂಗ್ರೆಸ್‌ ಪ್ರತ್ಯಾರೋಪ

ಪಿಟಿಐ
Published 9 ಮೇ 2019, 20:00 IST
Last Updated 9 ಮೇ 2019, 20:00 IST
   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ಪ್ರವಾಸಗಳಿಗೆ ವಾಯುಪಡೆ ವಿಮಾನಗಳನ್ನು ಬಳಸಿಕೊಂಡಿದ್ದಾರೆ. ಆದರೆ ಅದಕ್ಕೆ ಅತ್ಯಂತ ಕಡಿಮೆ ಶುಲ್ಕ ಪಾವತಿಸಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಜೀವ್ ಗಾಂಧಿ ಅವರು ಐಎನ್‌ಎಸ್‌ ವಿರಾಟ್ ನೌಕೆಯನ್ನು ತಮ್ಮ ವೈಯಕ್ತಿಕ ಪ್ರವಾಸಕ್ಕೆ ಬಳಸಿಕೊಂಡಿ ದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಈ ಆರೋಪ ಮಾಡಿದ್ದಾರೆ.

‘ಮೋದಿ ತಮ್ಮ ವೈಯಕ್ತಿಕ ಮತ್ತು ಚುನಾವಣಾ ಪ್ರಚಾರ ಪ್ರಯಾಣಕ್ಕೆ ವಾಯುಪಡೆ ವಿಮಾನಗಳನ್ನು ಬಳಸಿಕೊಂಡಿದ್ದಾರೆ. ಇಂತಹ 240 ಪ್ರಯಾಣಗಳಿಗೆ ಅವರು ₹ 1.4 ಕೋಟಿ ಪಾವತಿಸಿದ್ದಾರೆ. ಈಚೆಗೆ ಅವರು ಮಾಡಿದ ಪ್ರಯಾಣವೊಂದಕ್ಕೆ ವಿಮಾನದ ಶುಲ್ಕವೆಂದು ಕೇವಲ ₹ 744 ಪಾವತಿಸಿದ್ದಾರೆ. ವಾಯುಪಡೆಯನ್ನು ತಮ್ಮ ಟ್ಯಾಕ್ಸಿಯಂತೆ ಬಳಸಿಕೊಂಡಿದ್ದಾರೆ’ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.

ADVERTISEMENT

ಬಿಜೆಪಿ–ಕಾಂಗ್ರೆಸ್ ಜಟಾಪಟಿ:ಪ್ರಧಾನಿ ಮೋದಿ ಅವರ ಹೇಳಿಕೆಯು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಟಾಪಟಿಗೆ ಕಾರಣವಾಗಿದೆ.

‘ನಾಮಧಾರ್‌ (ರಾಜೀವ್ ಗಾಂಧೀ ಕುಟುಂಬ) ತಮ್ಮ ವೈಯಕ್ತಿಕ ಪ್ರವಾಸಕ್ಕೆ ಯುದ್ಧನೌಕೆ ಬಳಸಿಕೊಂಡಿದ್ದರು. ಆದರೆ ಕಾಮಧಾರ್ (ಪ್ರಧಾನಿ ಮೋದಿ) ಉಗ್ರರ ಮೇಲಿನ ದಾಳಿಗೆ ಯುದ್ಧನೌಕೆ ಬಳಸಿದ್ದಾರೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ನ ಬೆನ್ನಲ್ಲೇ ಕಾಂಗ್ರೆಸ್‌ ಐಟಿ ಘಟಕದ ಮುಖ್ಯಸ್ಥೆ ದಿವ್ಯ ಸ್ಪಂದನಾ ಟ್ವೀಟ್ ಮಾಡಿದ್ದಾರೆ. ‘ನಟ ಅಕ್ಷಯ್‌ ಕುಮಾರ್ ಕೆನಡದ ಪಾಸ್‌ಪೋರ್ಟ್‌ ಹೊಂದಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. 2016ರಲ್ಲಿ ಅಕ್ಷಯ್ ಅವರನ್ನು ಮೋದಿ ಅವರು ಐಎನ್‌ಎಸ್‌ ಸುಮಿತ್ರಾ ನೌಕೆಯಲ್ಲಿ ಕರೆದುಕೊಂಡು ಹೋಗಿದ್ದರು. ಮೋದಿ ಈ ಬಗ್ಗೆ ವಿವರಣೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಅಮಿತಾಬ್ ಬಚ್ಚನ್ ಅವರ ಕುಟುಂಬದವರೂ ರಾಜೀವ್ ಜತೆಗಿದ್ದರು ಎಂದು ಮೋದಿ ಹೇಳಿದ್ದಾರೆ. ಈ ಬಗ್ಗೆ ಅಮಿತಾಬ್ ಅವರು ಸ್ಪಷ್ಟನೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

***

ಸೋನಿಯಾ ಅವರ ತಾಯಿ ಸಹ ನೌಕೆಯಲ್ಲಿದ್ದರು. ವಿದೇಶಿಗರನ್ನು ಯುದ್ಧನೌಕೆಗೆ ಹತ್ತಿಸಿಕೊಳ್ಳುವ ಮೂಲಕ ದೇಶದ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಲಾಗಿತ್ತು

-ಅರುಣ್ ಜೇಟ್ಲಿ, ಹಣಕಾಸು ಸಚಿವ

ರಾಜೀವ್ ಗಾಂಧಿ ಅವರನ್ನು ಬಿಜೆಪಿ ಗೌರವಿಸುತ್ತದೆ. ಹಾಗೆಂದ ಮಾತ್ರಕ್ಕೆ ರಾಜೀವ್ ಅವರ ದುರಾಡಳಿತ ಮತ್ತು ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುವುದಿಲ್ಲ ಎಂದಲ್ಲ

-ನಿರ್ಮಲಾ ಸೀತಾರಾಮನ್, ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.