ನವದೆಹಲಿ: 2025ರಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ಆಡಳಿತಾರೂಢ ಎಎಪಿ ಹಾಗೂ ಬಿಜೆಪಿ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗುವ ಮೂಲಕ ಚುನಾವಣಾ ಕಾವು ಏರಿಸಿವೆ. ಇದಕ್ಕಾಗಿ ಅಲ್ಲು ಅರ್ಜುನ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ಪುಷ್ಪಾ–2 ಪೋಸ್ಟರ್ ಅನ್ನು ಬಳಸಿಕೊಳ್ಳಲಾಗಿದೆ.
ಪುಷ್ಪಾ –2 ಚಿತ್ರದ ಸಾಲುಗಳನ್ನೇ ಬಳಸಿಕೊಂಡಿರುವ ಎಎಪಿ ‘ಕೇಜ್ರಿವಾಲ್ ಜುಕೇಗಾ ನಹಿ’ (ಕೇಜ್ರಿವಾಲ್ ಬಗ್ಗುವುದಿಲ್ಲ) ಎಂದು ಬರೆದುಕೊಂಡಿತ್ತು. ಹೆಗಲಮೇಲೆ ಪಕ್ಷದ ಚಿಹ್ನೆಯಾದ ಪೊರಕೆಯನ್ನು ಹೊತ್ತಿರುವ ಕೇಜ್ರಿವಾಲ್ ಅವರನ್ನೇ ಪ್ರಧಾನವಾಗಿಟ್ಟುಕೊಂಡು ಪೋಸ್ಟರ್ ಸಿದ್ಧಪಡಿಸಲಾಗಿತ್ತು. ‘4ನೇ ಬಾರಿ ಶೀಘ್ರದಲ್ಲಿ ಬರುತ್ತಿದೆ’ ಎಂದು ಪೋಸ್ಟರ್‌ನಲ್ಲಿ ಹೇಳಲಾಗಿದೆ. 2013, 2015 ಹಾಗೂ 2020ರಲ್ಲಿ ಕೇಜ್ರಿವಾಲ್ ನೇತೃತ್ವದ ಎಎಪಿ ಚುನಾವಣೆಯಲ್ಲಿ ಗೆಲುವು ದಾಖಲಿಸಿತ್ತು.
ಇದಕ್ಕೆ ಪ್ರತಿಯಾಗಿ ಬಿಜೆಪಿ ತನ್ನದೇ ಆದ ಪೋಸ್ಟರ್ ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿಜೇಂದ್ರ ಸಚ್‌ದೇವ್ ಅವರನ್ನೇ ಪ್ರಮುಖವಾಗಿಟ್ಟುಕೊಂಡು ಪುಷ್ಪಾ ಚಿತ್ರದ ಪೋಸ್ಟರ್ ಸಿದ್ಧಪಡಿಸಲಾಗಿದೆ. ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ಸಿಂಹಾಸನದ ಮೇಲೆ ಕೂತಂತೆ ರಚಿಸಲಾಗಿರುವ ಈ ಪೋಸ್ಟರ್‌ನ ಅಡಿಬರಹವಾಗಿ ‘ಭ್ರಷ್ಟಾಚಾರಿಯೋಂಕೊ ಖತಂ ಕರೇಂಗೆ’ (ಭ್ರಷ್ಟಾಚಾರಿಗಳನ್ನು ಅಂತ್ಯಗೊಳಿಸಲಾಗುವುದು) ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ.
70 ಸದಸ್ಯಬಲದ ದೆಹಲಿ ವಿಧಾನಸಭೆಯಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ಎಎಪಿಯು ಅಧಿಕಾರದ ಚುಕ್ಕಾಣಿ ಹಿಡಿದಿದೆ. 2015 ಹಾಗೂ 2020ರಲ್ಲಿ ಕ್ರಮವಾಗಿ 67 ಹಾಗೂ 63 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವನ್ನು ಎಎಪಿ ದಾಖಲಿಸಿತ್ತು. 2013ರ ಚುನಾವಣೆಯಲ್ಲಿ 29 ಸ್ಥಾನ ಗೆದ್ದಿದ್ದ ಎಎಪಿ, ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು.
ಈ ಬಾರಿಯೂ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ. ಮತ್ತೊಂದೆಡೆ ಬಿಜೆಪಿ 1998ರಿಂದ ಅಧಿಕಾರ ವಂಚಿತವಾಗಿರುವುದರಿಂದ ಈ ಬಾರಿ ಶತಾಯಗತಾಯ ಅಧಿಕಾರ ಹಿಡಿಯಲು ರಣತಂತ್ರ ರಚಿಸುತ್ತಿದೆ.
ಚುನಾವಣೆ ಘೋಷಣೆಯಾಗುವ ಮೊದಲೇ ಎರಡೂ ಪಕ್ಷಗಳ ನಡುವೆ ವಾಗ್ಯುದ್ಧ ಜೋರಾಗಿ ನಡೆದಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ಹೇಳಿಕೆ, ಪೋಸ್ಟರ್, ಮೀಮ್ ಹಾಗೂ ಆ್ಯನಿಮೇಷನ್ ವಿಡಿಯೊ ಸಹಿತ ಪರಸ್ಪರ ಕಾಲೆಳೆದುಕೊಳ್ಳುವ ಪ್ರಕ್ರಿಯೆ ಹೆಚ್ಚಾಗಿದೆ.
ಅಬ್ ನಹಿ ಸಹೇಂಗೆ, ಬದಲ್ ಕರ್ ರಹೇಂಗೆ (ಇನ್ನು ಸಹಿಸಲು ಸಾಧ್ಯವಿಲ್ಲ, ಬದಲಾವಣೆ ತರುತ್ತೇವೆ) ಎಂದು ಎಎಪಿ ವಿರುದ್ಧ ಬಿಜೆಪಿ ಗುಡುಗಿದೆ. ಹತ್ತು ವರ್ಷಗಳ ಆಡಳಿತದಲ್ಲಿ ಕೇಜ್ರಿವಾಲ್ ನೇತೃತ್ವದ ಎಎಪಿ ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದೆ.
ದೆಹಲಿಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆಯನ್ನೇ ಮುಖ್ಯವಾಗಿಟ್ಟುಕೊಂಡು ಎಎಪಿ ವಾಗ್ದಾಳಿ ನಡೆಸುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆರೋಪಗಳನ್ನು ಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿರುವುದನ್ನೇ ಪ್ರಧಾನವಾಗಿಟ್ಟುಕೊಂಡು ಎಎಪಿ ವಾಗ್ದಾಳಿ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.