ADVERTISEMENT

ಇನ್‌ಸ್ಟಾಗ್ರಾಮ್ ಪ್ರಭಾವಿ ಶರ್ಮಿಷ್ಠಾ ಬಿಡುಗಡೆಗೊಳಿಸಿ: ದೆಹಲಿ ಬಾರ್ ಕೌನ್ಸಿಲ್

ಪಿಟಿಐ
Published 2 ಜೂನ್ 2025, 13:19 IST
Last Updated 2 ಜೂನ್ 2025, 13:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ನವದೆಹಲಿ: ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ವಿಡಿಯೊ ಹಂಚಿಕೊಂಡ ಆರೋಪದಡಿ ಬಂಧಿಸಲಾಗಿರುವ ಕೋಲ್ಕತ್ತ ಮೂಲದ ಶರ್ಮಿಷ್ಠಾ ಪನೋಲಿ ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ದೆಹಲಿಯ ಬಾರ್‌ ಕೌನ್ಸಿಲ್‌ ಒತ್ತಾಯಿಸಿದೆ.

ADVERTISEMENT

‘ಆಪರೇಷನ್‌ ಸಿಂಧೂರ’ ಕುರಿತು ಬಾಲಿವುಡ್‌ ನಟ–ನಟಿಯರು ಮೌನವಹಿಸಿದ್ದರು ಎಂದು ಟೀಕಿಸಿದ್ದ ಶರ್ಮಿಷ್ಠಾ, ಈ ಕುರಿತ ವಿಡಿಯೊ ಅಪ್‌ಲೋಡ್‌ ಮಾಡಿದ್ದರು. ಅವರ ಹೇಳಿಕೆಗಳು ಕೋಮು ಭಾವನೆ ಕೆರಳಿಸುವಂತಿವೆ ಎಂಬ ಆರೋಪದಡಿ ಪಶ್ಚಿಮ ಬಂಗಾಳ ಪೊಲೀಸರು ಮೇ 30ರಂದು ಗುರುಗ್ರಾಮದಲ್ಲಿ ಶರ್ಮಿಷ್ಠಾ ಅವರನ್ನು ಬಂಧಿಸಿದ್ದರು.

ನಂತರ ಅವರನ್ನು ಕೋಲ್ಕತ್ತ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಜೂನ್‌ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

‘ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ವಿಡಿಯೊಗೆ ಸಂಬಂಧಿಸಿದಂತೆ, ಕ್ಷಮೆಯಾಚಿಸಿ ತೆಗೆದುಹಾಕಿದ್ದರೂ ಕೂಡ 22 ವರ್ಷದ ಕಾನೂನು ವಿದ್ಯಾರ್ಥಿ ಶರ್ಮಿಷ್ಠಾ ಪನೋಲಿ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿರುವುದನ್ನು ದೆಹಲಿ ಬಾರ್‌ ಕೌನ್ಸಿಲ್‌ ಬಲವಾಗಿ ಖಂಡಿಸುತ್ತದೆ. ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ತಕ್ಷಣವೇ ಅವರನ್ನು ಬಿಡುಗಡೆಗೊಳಿಸಬೇಕು ಒತ್ತಾಯಿಸುತ್ತಿದ್ದೇವೆ’ ಎಂದು ಕೌನ್ಸಿಲ್‌ ಅಧ್ಯಕ್ಷ ಸೂರ್ಯಪ್ರಕಾಶ್‌ ಖತ್ರಿ ಒತ್ತಾಯಿಸಿದ್ದಾರೆ.

ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷ ಮನನ್‌ ಕುಮಾರ್ ಮಿಶ್ರಾ ಅವರು ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ.

ಕಾನೂನಿನ ಅಡಿಯಲ್ಲಿ ಬಂಧನ:

‘ಶರ್ಮಿಷ್ಠಾ ಅವರನ್ನು ಜಾರಿಯಲ್ಲಿರುವ ಕಾನೂನಿನ ಕಾರ್ಯವಿಧಾನದಲ್ಲಿಯೇ ಬಂಧಿಸಲಾಗಿದೆ. ದೇಶಭಕ್ತಿ ಅಥವಾ ನಂಬಿಕೆಯನ್ನು ಪ್ರದರ್ಶಿಸಿದ್ದಕ್ಕೆ ಅವರನ್ನು ಬಂಧಿಸಿಲ್ಲ. ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ವಿಡಿಯೊ ಹಂಚಿಕೊಂಡ ಆರೋಪದಡಿ ಬಂಧಿಸಲಾಗಿದೆ’ ಎಂದು ಕೋಲ್ಕತ್ತ ಪೊಲೀಸರು ಫೇಸ್‌ಬುಕ್‌ನಲ್ಲಿ ಫೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.