ADVERTISEMENT

ಅಂತರರಾಷ್ಟ್ರೀಯ ಯೋಗದಿನ | ಕೋವಿಡ್‌ ಎದುರಿಸಲು ಯೋಗ ಪರಿಣಾಮಕಾರಿ : ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2020, 11:43 IST
Last Updated 21 ಜೂನ್ 2020, 11:43 IST
ಪ್ರಧಾನಿ ಮೋದಿ ಯೋಗಾಭ್ಯಾಸ ಮಾಡುತ್ತಿರುವುದು. (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ ಯೋಗಾಭ್ಯಾಸ ಮಾಡುತ್ತಿರುವುದು. (ಸಂಗ್ರಹ ಚಿತ್ರ)   

ನವದೆಹಲಿ : ‘ಕೊರೊನಾ ಪಿಡುಗಿನ ಪ್ರಸ್ತುತ ಸಂದರ್ಭದಲ್ಲಿ ಯೋಗದ ಮಹತ್ವ ಜಗತ್ತಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚು ಅರ್ಥವಾಗತೊಡಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರತಿಪಾದಿಸಿದರು.

‘ಭಾರತದಲ್ಲಿ ಆಚರಣೆಯಲ್ಲಿರುವ ಯೋಗವು ವಿಶ್ವದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಕೋವಿಡ್‌–19 ರೋಗಿಗಳಿಗೆ, ಈ ಪಿಡುಗನ್ನು ಪರಿಣಾಮಕಾರಿಯಾಗಿ ಎದುರಿಸಲು ನೆರವಾಗುತ್ತಿದೆ’ ಎಂದು ‘ಆರನೇ ಅಂತರರಾಷ್ಟ್ರೀಯ ಯೋಗ ದಿನ’ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಅವರು ಹೇಳಿದರು.

ಕೊರೊನಾ ಸೋಂಕು ಪ್ರಮುಖವಾಗಿ ಮನುಷ್ಯನ ಉಸಿರಾಟ ಕ್ರಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಯೋಗದಲ್ಲಿನ ಪ್ರಾಣಾಯಾಮ ಆಸನವು ದೇಹದಲ್ಲಿ ಉಸಿರಾಟದ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು, ಸರಾಗವಾಗಿಸಲು ಸಹಕಾರಿಯಾಗಿರಲಿದೆ ಎಂದು ಮೋದಿ 15 ನಿಮಿಷಗಳ ಭಾಷಣದಲ್ಲಿ ಹೇಳಿದರು.

ADVERTISEMENT

‘ಯೋಗವು ಇಂದು ಏಕತೆಯ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಆರೋಗ್ಯಕರವಾದ ಜಗತ್ತು ರೂಪಿಸಲುಯೋಗ ಸಹಕಾರಿಯಾಗಿದೆ. ಮಾನವೀಯತೆ ಬೆಸೆಯಲಿದೆ. ವರ್ಣ, ಬಣ್ಣ, ಲಿಂಗಭೇದ, ನಂಬಿಕೆ ಮತ್ತು ರಾಷ್ಟ್ರಗಳ ನಡುವೆ ತಾರತಮ್ಯ ಎಸಗುವುದಿಲ್ಲ. ಯಾರು ಬೇಕಿದ್ದರೂ ಯೋಗ ಮಾಡಬಹುದು’ ಎಂದರು.

ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ, ಸೋಂಕು ಎದುರಿಸಲು ಸಹಕಾರಿ. ಈ ಶಕ್ತಿಯನ್ನು ಹೆಚ್ಚಿಸಲು ಯೋಗದಲ್ಲಿ ಅನೇಕ ಆಸನಗಳಿವೆ. ಈ ಆಸನಗಳು ದೇಹದಲ್ಲಿ ಶಕ್ತಿಯನ್ನು ಇಮ್ಮಡಿಸಲಿದೆ ಎಂದರು.

‘ಪ್ರಾಣಾಯಾಮ ಆಸನದ ಲಾಭಗಳನ್ನು ವಿವರಿಸಿದ ಅವರು, ಈ ಆಸನದಲ್ಲಿ ಮೂರು ಕ್ರಮಗಳಿವೆ. ಇವುಗಳಿಂದ ಉಸಿರಾಟದ ವ್ಯವಸ್ಥೆ ಉತ್ತಮಗೊಳ್ಳಲಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಉತ್ತಮವಾಗಲಿದೆ. ಜನರು ಪ್ರಾಣಾಯಾಮ ಅನುಸರಿಸಲು ಹೆಚ್ಚಿನ ಒತ್ತು ನೀಡಬೇಕು’ ಎಂದು ಸಲಹೆ ಮಾಡಿದರು.

ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಯೋಗ ದಿನ ಆಚರಿಸಲು ಡಿಜಿಟಲ್‌ ಮಾಧ್ಯಮದ ಮೊರೆ ಹೋಗಲಾಯಿತು. ‘ಮನೆಯಲ್ಲಿಯೇ ಯೋಗ, ಕುಟುಂಬದೊಂದಿಗೆ ಯೋಗ’ ಎಂಬುದು ಈ ವರ್ಷದ ಘೋಷಣಾ ವಾಕ್ಯವಾಗಿತ್ತು.

ವಿಶ್ವಸಂಸ್ಥೆಯ ಸಮಾವೇಶವು ಡಿಸೆಂಬರ್ 11, 2014ರಲ್ಲಿ ಜೂನ್‌ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾ‍ಪಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಈ ಕ್ರಮ ಕೈಗೊಂಡಿತ್ತು.

ಈ ವರ್ಷ ಲೆಹ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಯೋಗ ದಿನ ಆಯೋಜಿಸಲು ಕೇಂದ್ರದ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ಸಚಿವಾಲಯ ನಿರ್ಧರಿಸಿತ್ತು. ಆದರೆ, ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಕಡೆಗಳಿಗೆಯಲ್ಲಿ ಕೈಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.