ADVERTISEMENT

ಮಣಿಪುರ ಗಲಭೆ: ಚುರಚಾಂದ್‌ಪುರ ಎಸ್‌ಪಿ ಕಚೇರಿಗೆ ನುಗ್ಗಿದ ಕಿಡಿಗೇಡಿಗಳು

ಪಿಟಿಐ
Published 16 ಫೆಬ್ರುವರಿ 2024, 5:01 IST
Last Updated 16 ಫೆಬ್ರುವರಿ 2024, 5:01 IST
<div class="paragraphs"><p>ಮಣಿಪುರದಲ್ಲಿ ಸೇನೆ</p></div>

ಮಣಿಪುರದಲ್ಲಿ ಸೇನೆ

   

ಇಂಫಾಲ್‌: ಕುಕಿ ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಚುರಚಾಂದ್‌ಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಗಲಭೆ ನಡೆದಿದ್ದು, ಶುಕ್ರವಾರದಿಂದ ಐದು ದಿನಗಳವರೆಗೆ ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿದೆ.

ಪೊಲೀಸ್‌ ಕಾನ್‌ಸ್ಟೆಬಲ್‌ ವಿರುದ್ಧ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಗಲಭೆ ನಡೆದಿದೆ. ಎಸ್‌ಪಿ ಕಚೇರಿ ಹಾಗೂ ಡೆಪ್ಯುಟಿ ಕಮಿಷನರ್‌ ಕಚೇರಿಗೆ ನುಗ್ಗಿ, ಸಾರ್ವಜನಿಕ ಆಸ್ತಿ ನಾಶಮಾಡಲಾಗಿದೆ. ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಯ (ಸಿಎಪಿಎಫ್‌) ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಎಸ್‌ಪಿ ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಗಿದೆ. ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸಮಾಜ ವಿರೋಧಿ ಶಕ್ತಿಗಳು ತಿರುಚಿದ ಚಿತ್ರಗಳು, ವಿಡಿಯೊಗಳು ಮತ್ತು ಪೋಸ್ಟ್‌ಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವ ಆತಂಕವಿದೆ. ಇದು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಪ್ರಚೋದನಕಾರಿ ಮತ್ತು ಸುಳ್ಳು ಮಾಹಿತಿಯಿಂದ ಪ್ರಾಣಹಾನಿ, ಸಾರ್ವಜನಿಕ ಆಸ್ತಿ ನಾಶ, ಸಾಮಾಜಿಕ ಶಾಂತಿ ಭಂಗ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆಯಾಗಬಹುದು. ಹೀಗಾಗಿ ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿದೆ ಎಂದು ಮಣಿಪುರ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ಶಸ್ತ್ರಾಸ್ತ್ರ ಹೊಂದಿದ್ದ ವ್ಯಕ್ತಿಯೊಂದಿಗೆ ಜಿಲ್ಲಾ ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರು ಇದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಕಾನ್‌ಸ್ಟೆಬಲ್‌ ಅನ್ನು ಗುರುವಾರ ಅಮಾನತು ಮಾಡಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಸರ್ಕಾರಿ ಕಚೇರಿಗಳ ಆವರಣಕ್ಕೆ ನುಗ್ಗಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಪ್ರತಿಭಟನಾಕಾರರನ್ನು ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆಯಲು ರಕ್ಷಣಾ ಪಡೆಗಳು ಹಲವು ಸುತ್ತು ಅಶ್ರುವಾಯು ಶೆಲ್ ಸಿಡಿಸಿವೆ.

ಈ ವೇಳೆ ನಡೆದ ಗಲಭೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್‌) ಜಿಲ್ಲೆಯಲ್ಲಿ ಇಂದು (ಶುಕ್ರವಾರ) ಬಂದ್‌ಗೆ ಕರೆ ನೀಡಿದೆ. ಹೆಡ್‌ ಕಾನ್‌ಸ್ಟೆಬಲ್‌ ಅಮಾನತು ನ್ಯಾಯಸಮ್ಮತವಲ್ಲ. ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.