ADVERTISEMENT

‘ದಮನವೇ ಆರ್‌ಟಿಐ ತಿದ್ದುಪಡಿ ಉದ್ದೇಶ’

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 20:09 IST
Last Updated 30 ಜುಲೈ 2019, 20:09 IST
ಅರುಣಾ ರಾಯ್‌
ಅರುಣಾ ರಾಯ್‌   

ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನ ಹಿಂದೆಯೂ ನಡೆದಿದೆ. ಆದರೆ, ಯಾವ ಯತ್ನವೂ ಇಷ್ಟೊಂದು ರಹಸ್ಯವಾಗಿರಲಿಲ್ಲ. ಈಗಿನ ತಿದ್ದುಪಡಿಯ ಮೂಲಕ ಸರ್ಕಾರವು ಆರ್‌ಟಿಐ ಸಮುದಾಯದ ಮೇಲೆ ಹೊಂಚು ದಾಳಿ ನಡೆಸಿದಂತಾಗಿದೆ.

2005ರ ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಈಗಿನ ತಿದ್ದುಪಡಿ ದುರ್ಬಲ ಮಾಡಿದೆಯೇ? ಎರಡರ ನಡುವಣ ವ್ಯತ್ಯಾಸ ಏನು?
ತಿದ್ದುಪಡಿ ಕಾಯ್ದೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಮಾಹಿತಿ ಆಯುಕ್ತರ ಸ್ವಾಯತ್ತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆರ್‌ಟಿಐ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಮಾಹಿತಿ ಆಯುಕ್ತರ ಹೊಣೆಗಾರಿಕೆ. ಮೇಲ್ಮನವಿ ಪ್ರಾಧಿಕಾರವಾಗಿಯೂ ಕೆಲಸ ಮಾಡುವ ಆಯೋಗದ ನಿಯಂತ್ರಣವು ಸರ್ಕಾರದ ಕೈಗೆ ಹೋದರೆ, ಆಯುಕ್ತರ ಮೇಲೆ ಸರ್ಕಾರ ಪ್ರಭಾವ ಬೀರಬಹುದು ಮತ್ತು ಒತ್ತಡ ಹೇರಬಹುದು.

ಕೇಂದ್ರ ಮತ್ತು ರಾಜ್ಯ ಮಟ್ಟಗಳೆರಡರಲ್ಲೂ ಮಾಹಿತಿ ಆಯುಕ್ತರ ಸ್ಥಾನಮಾನವು ಚುನಾವಣಾ ಆಯುಕ್ತರಿಗೆ ಸಮಾನವಾದುದು ಎಂದು ಮೂಲ ಕಾಯ್ದೆ ಹೇಳುತ್ತದೆ. ಆದರೆ, ಈಗಿನ ತಿದ್ದುಪಡಿ ಪ್ರಕಾರ, ಕೇಂದ್ರ ಮತ್ತು ರಾಜ್ಯ ಮಟ್ಟದ ಮಾಹಿತಿ ಆಯುಕ್ತರ ವೇತನ ಮತ್ತು ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರವೇ ನಿರ್ಧರಿಸಲಿದೆ.

ADVERTISEMENT

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಿದ್ದುಪಡಿ ಅಂಗೀಕಾರ ಆಗಿದೆ. ಈಗ ಇರುವ ಆಯ್ಕೆಗಳು ಏನು?
ಮಾಹಿತಿ ಆಯೋಗವನ್ನು ಸಾಂವಿಧಾನಿಕ ಸಂಸ್ಥೆ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಮಾಹಿತಿ ಆಯೋಗದ ಸ್ಥಾನಮಾನವನ್ನು ದುರ್ಬಲಗೊಳಿಸುವ ಬದಲಿಗೆ ಅದನ್ನು ಮೇಲಕ್ಕೆ ಏರಿಸಬೇಕು ಎಂಬುದು ನಮ್ಮ ಆಗ್ರಹ. ‘ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆ, ಆದರೆ ಮಾಹಿತಿ ಆಯೋಗವು ಶಾಸನಾತ್ಮಕ ಸಂಸ್ಥೆ. ಹಾಗಾಗಿ ಎರಡೂ ಸಂಸ್ಥೆಗಳಿಗೆ ಒಂದೇ ಸ್ಥಾನಮಾನ ನೀಡುವುದು ಸಾಧ್ಯವಿಲ್ಲ’ ಎಂಬುದು ತಿದ್ದುಪಡಿಗೆ ಸರ್ಕಾರ ನೀಡುತ್ತಿರುವ ಸಮರ್ಥನೆ. ಆದರೆ, ಈ ವಾದದಲ್ಲಿ ಹುರುಳಿಲ್ಲ. ಯಾಕೆಂದರೆ ಇದಕ್ಕೆ ಕಾನೂನಿನ ಆಧಾರವೇ ಇಲ್ಲ. ಜಾಗೃತ ಆಯೋಗ ಮತ್ತು ಲೋಕಪಾಲದಂತಹ ಶಾಸನಾತ್ಮಕ ಸಂಸ್ಥೆಗಳಿಗೆ ಚುನಾವಣಾ ಆಯೋಗಕ್ಕೆ ಸಮನಾದ ಸ್ಥಾನಮಾನ ಇದೆ.

ಕೇಂದ್ರ ಸರ್ಕಾರವು ತಿದ್ದುಪಡಿಗೆ ಆತುರ ಮಾಡಲು ಕಾರಣವೇನು ಎಂದು ನೀವು ಭಾವಿಸಿದ್ದೀರಿ? ಸರ್ಕಾರಕ್ಕೆ ಆರ್‌ಟಿಐ ಕಾಯ್ದೆ ಬಗ್ಗೆ ಭಯ ಇದೆಯೇ?
ಈಗಿನ ಸರ್ಕಾರವು ಪ್ರಶ್ನಿಸುವುದನ್ನು ಇಷ್ಟಪಡುವುದಿಲ್ಲ. ಸರ್ಕಾರವನ್ನು ಯಾರೇ ಪ್ರಶ್ನಿಸಿದರೂ ಅವರಿಗೆ ದೇಶ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಭಿನ್ನಮತದ ದಮನ ಮತ್ತು ಸರ್ಕಾರದ ನಿಲುವುಗಳನ್ನು ಒಪ್ಪದೇ ಇರುವವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನು ತಡೆಯುವ ಹಲವು ಕ್ರಮಗಳಲ್ಲಿ ಆರ್‌ಟಿಐಯನ್ನು ದುರ್ಬಲಪಡಿಸಿರುವುದೂ ಒಂದು. ಇದು ವಿರೋಧವನ್ನು ದಮನಮಾಡುವ ಸರ್ಕಾರದ ದೊಡ್ಡ ಕಾರ್ಯಸೂಚಿಯ ಭಾಗ.

ತಮ್ಮ ಜೀವವನ್ನು ಬಲಿಯಾಗಿಸಿದ ಹಲವಾರು ಆರ್‌ಟಿಐ ಕಾರ್ಯಕರ್ತರಿಗೆ ಈ ತಿದ್ದುಪಡಿಯು ಅಗೌರವ ತೋರುತ್ತದೆ ಅನಿಸುತ್ತದೆಯೇ?
ಖಂಡಿತವಾಗಿ. ಮಾಹಿತಿ ಪಡೆಯುವುದಕ್ಕಾಗಿಯೇ ಹಲವಾರು ಜನರು ಜೀವ ತೆತ್ತಿದ್ದಾರೆ. ಈಗ, ಜನರು ಮಾಹಿತಿ ಪಡೆಯುವುದನ್ನು ಇನ್ನಷ್ಟು ಕಠಿಣವಾಗಿಸಲು ಅಧಿಕಾರದಲ್ಲಿ ಇರುವವರು ಯತ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.