ADVERTISEMENT

ಐಎನ್‌ಎಕ್ಸ್‌ ಮೀಡಿಯ ಹಗರಣ | ಚಿದಂಬರಂ ‘ಕಿಂಗ್‌ಪಿನ್‌’: ದೆಹಲಿ ಹೈಕೋರ್ಟ್‌

ನಿರೀಕ್ಷಣಾ ಜಾಮೀನು ರದ್ದು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 1:26 IST
Last Updated 21 ಆಗಸ್ಟ್ 2019, 1:26 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ‘ಐಎನ್‌ಎಕ್ಸ್‌ ಮೀಡಿಯ’ ಹಗರಣದಲ್ಲಿ ಆರೋಪಿಯಾಗಿ, ಬಂಧನದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರಿಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ರದ್ದುಪಡಿಸಿದೆ.

‘ತನಿಖಾ ಸಂಸ್ಥೆಗಳು ನೀಡಿರುವ ಅಗಾಧ ಪ್ರಮಾಣದ ದಾಖಲೆಗಳನ್ನು ಪರಿಶೀಲಿಸಿದಾಗ, ‘ಐಎನ್‌ಎಕ್ಸ್‌ ಹಗರಣ’ದಲ್ಲಿ ಅರ್ಜಿದಾರರೇ (ಚಿದಂಬರಂ) ‘ಕಿಂಗ್‌ಪಿನ್‌’ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇವರ ವಿರುದ್ಧ ಕೈಗೊಂಡಿರುವ ಕಾನೂನು ಕ್ರಮವನ್ನು ಆಧಾರರಹಿತ, ರಾಜಕೀಯ ಪ್ರೇರಿತ ಅಥವಾ ದ್ವೇಷದ ಕ್ರಮ ಎಂದು ಹೇಳಲಾಗದು’ ಎಂದು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸುನಿಲ್‌ ಗೌರ್‌ ಹೇಳಿದರು.

‘ಹಗರಣದ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಬೇಕಾದರೆ ಆರೋಪಿಯನ್ನು ತನಿಖಾ ಸಂಸ್ಥೆಯ ವಶಕ್ಕೆ ನೀಡುವುದು ಅಗತ್ಯ. ಇಂಥ ಹಗರಣದ ಆರೋಪಿಗೆ ಜಾಮೀನು ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸಂಸದ ಎಂಬ ಕಾರಣಕ್ಕೆ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲಾಗದು’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ADVERTISEMENT

‘ಹಣದ ಅಕ್ರಮ ವರ್ಗಾವಣೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಈ ಹಗರಣ ಅತ್ಯುತ್ತಮ ನಿದರ್ಶನ. ಇಂಥ ವಿಚಾರದಲ್ಲಿ ಕಾನೂನಿನ ತೊಡಕುಗಳನ್ನು ಸೃಷ್ಟಿಸಿ ತನಿಖಾ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗದು ಎಂದು ನ್ಯಾಯಮೂರ್ತಿ ಹೇಳಿದರು. ಗೌರ್‌ ಅವರು ಬರುವ ಗುರುವಾರ ಸೇವಾನಿವೃತ್ತಿ ಹೊಂದಲಿದ್ದಾರೆ.

ಪೀಟರ್‌ ಮತ್ತು ಇಂದ್ರಾಣಿ ಮುಖರ್ಜಿ ಮಾಲೀಕತ್ವದ ಐಎನ್ಎಕ್ಸ್‌ ಮೀಡಿಯ ಸಂಸ್ಥೆಯಲ್ಲಿ ₹ 305 ಕೋಟಿ ವಿದೇಶಿ ಬಂಡವಾಳ ಹೂಡಿಕೆಯ ಪ್ರಸ್ತಾವಕ್ಕೆ 2007ರಲ್ಲಿ ಚಿದಂಬರಂ ಅವರು ಸರ್ಕಾರದ ಅನುಮತಿ ನೀಡಿದ್ದರು. ಈ ವಹಿವಾಟಿನಲ್ಲಿ ಚಿದಂಬರಂ ಅವರ ಪುತ್ರ ಕಾರ್ತಿ ಅವರು ಭಾರಿ ಪ್ರಮಾಣದ ಲಂಚ ಪಡೆದಿದ್ದಾರೆ ಎಂದು ಆರೋಪ ಬಂದಿತ್ತು. 2017ರ ಮೇ ತಿಂಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಬಿಐಯವರು ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವ ಬಗ್ಗೆ ಜಾರಿ ನಿರ್ದೇಶನಾಲಯವು 2018ರಲ್ಲಿ ಪ್ರಕರಣ ದಾಖಲಿಸಿತ್ತು. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿದ್ದ ಚಿದಂಬರಂ ಅವರು ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. 2018ರ ಜುಲೈ 25ರಂದು ಅವರಿಗೆ ಕೋರ್ಟ್‌ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಕಾರ್ತಿ ಅವರು ಬಂಧನಕ್ಕೊಳಗಾಗಿ 23 ದಿನಗಳ ಕಾಲ ಕಸ್ಟಡಿಯಲ್ಲಿದ್ದರು.

ಇಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ

ದೆಹಲಿ ಹೈಕೋರ್ಟ್‌ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿದ ಕೆಲವೇ ನಿಮಿಷಗಳಲ್ಲಿ ಚಿದಂಬರಂ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋದರು. ಆದರೆ ಬುಧವಾರ ಬಂದು ಅರ್ಜಿ ಸಲ್ಲಿಸುವಂತೆ ಚಿದಂಬರಂ ಪರ ವಕೀಲರಾದ ಕಪಿಲ್‌ ಸಿಬಲ್‌ ನೇತೃತ್ವದ ವಕೀಲರ ತಂಡಕ್ಕೆ ಸೂಚಿಸಲಾಯಿತು.

ಮನೆಗೆ ಧಾವಿಸಿದ ಅಧಿಕಾರಿಗಳು

ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಿದಂಬರಂ ಅವರ ಮನೆಗೆ ಧಾವಿಸಿದ ನಾಟಕೀಯ ಬೆಳವಣಿಗೆ ಮಂಗಳವಾರ ಸಂಜೆ ನಡೆಯಿತು.

ಆದರೆ ಚಿದಂಬರಂ ಅವರು ಅಲ್ಲಿ ಇಲ್ಲ ಎಂಬುದು ಖಚಿತವಾದ ನಂತರ ಅವರು ಮರಳಿದರು. ನೋಟಿಸ್‌ ತಲುಪಿದ ಎರಡು ತಾಸಿನೊಳಗೆ ತನಿಖೆಗೆ ಹಾಜರಾಗಿ ಎಂದು ಸಿಬಿಐ ನೋಟಿಸ್‌ನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.