ADVERTISEMENT

ದೆಹಲಿ | ಕಳ್ಳತನ ಗ್ಯಾಂಗ್ ಬೇಧಿಸಿದ ಪೊಲೀಸರು: 43 ಐಫೋನ್ ವಶಕ್ಕೆ

ಪಿಟಿಐ
Published 4 ಜುಲೈ 2025, 11:02 IST
Last Updated 4 ಜುಲೈ 2025, 11:02 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ನವದೆಹಲಿ: ದುಬಾರಿ ಮೊಬೈಲ್‌ಗಳನ್ನು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದು, ಅವರಿಂದ 43 ಆ್ಯಪಲ್ ಐಫೋನ್ ಹಾಗೂ ಒಂದು ಸ್ಯಾಮ್‌ಸಂಗ್‌ ಫೋಲ್ಡ್ ಫೋನ್‌ ವಶಪಡಿಸಿಕೊಳ್ಳಲಾಗಿದೆ.

ADVERTISEMENT

ದೆಹಲಿಯ ದೇವ ನಗರ ಪ್ರದೇಶದ ಕರೋಲ್‌ಬಾಗ್‌ನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಇತ್ತೀಚೆಗೆ ಐಪಿ ಎಸ್ಟೇಟ್‌ ಪ್ರದೇಶದಲ್ಲಿ ನಡೆದ ಕಳ್ಳತನ ‍ಪ್ರಕರಣದಲ್ಲಿ ಕಳುವಾಗಿದ್ದ ಐಫೋನ್–15 ಅನ್ನು ಈ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನವದೀಪ್ ಕೌರ್ (26) ಹಾಗೂ ರಮಣ್‌ದೀಪ್ ಭಂಗು (33) ಬಂಧಿತರು. ಮೊಬೈಲ್ ರಿಪೇರಿ ಉದ್ಯಮದಲ್ಲಿ ನಷ್ಟ ಅನುಭವಿಸಿದ ಬಳಿಕ, ಮುಂದಿನ ದಾರಿ ನೋಡುತ್ತಿದ್ದ ಅವರು ಕಳ್ಳತನಕ್ಕೆ ಇಳಿದಿದ್ದರು.

ಪಂಜಾಬ್‌ನ ಭಟಿಂಡ ಮೂಲದ ಬಿ.ಎಸ್ಸಿ ಪದವೀಧರಳಾಗಿರುವ ನವದೀಪ್ ಕೌರ್ ಮೊಬೈಲ್ ರಿಪೇರಿ ತಂತ್ರಜ್ಞಳೂ ಆಗಿದ್ದು, ಕದ್ದ ಮೊಬೈಲ್‌ಗಳನ್ನು ಬಿಚ್ಚಿ, ಬಿಡಿಭಾಗ ಕಳಚಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ 24ರಂದು ಐಪಿ ಎಸ್ಟೇಟ್ ಪ್ರದೇಶದಲ್ಲಿ ನಡೆದ ಕಳ್ಳತನ ಪ್ರಕರಣದ ಬಳಿಕ ಈ ಗ್ಯಾಂಗ್ ಅನ್ನು ಬೇಧಿಸಲಾಗಿದೆ.

ಕಳ್ಳತನವಾಗಿದ್ದ ಐಫೋನ್‌ನ ಲೊಕೇಶನ್ ದೇವ ನಗರ ಸಮೀಪ ಇರುವುದನ್ನು ಪತ್ತೆ ಮಾಡಿದ ಪೊಲೀಸರು ಜೂನ್ 26ರಂದು ದಾಳಿ ನಡೆಸಿದ್ದಾರೆ.

ಕೌರ್‌ಳನ್ನು ಆಕೆಯ ಮನೆಯಲ್ಲಿ ಬಂಧಿಸಲಾಗಿದ್ದು, ಕಳುವಾದ ಐಫೋನ್ ಸೇರಿ ಒಟ್ಟು 44 ಮೊಬೈಲ್‌ಗಳನ್ನು ಆಕೆಯಿಂದ ವಶಪಡಿಸಿಕೊಳ್ಳಲಾಗಿದೆ. ಭಾರಿ ‍ಪ್ರಮಾಣದ ಐಫೋನ್ ಬಿಡಿಭಾಗಗಳೂ ಸಿಕ್ಕಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ಕೌರ್ ತನ್ನ ಇನ್ನಿಬ್ಬರು ಸಹಚರರ ಹೆಸರನ್ನು ಬಾಯಿ ಬಿಟ್ಟಿದ್ದಾಳೆ. ಸಂಜೀವ್ ಕುಮಾರ್ ಈಗ ತಲೆ ಮರೆಸಿಕೊಂಡಿದ್ದು, ರಮಣದೀಪ್ ಭಂಗುನನ್ನು ನೇಪಾಳಕ್ಕೆ ಪರಾರಿಯಾಗುವ ವೇಳೆ ಹಿಮಾಚಲ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕರೋಲ್ ಬಾಗ್‌ನ ಮಹಿಳೆಯೊಬ್ಬರಿಂದ ಕದ್ದ ಫೋನ್‌ಗಳನ್ನು ಖರೀದಿಸಿ, ನಂತರ ಅವುಗಳನ್ನು ಬಿಚ್ಚಿ, ಬಿಡಿಭಾಗಗಳನ್ನು ರಿಪೇರಿ ಅಂಗಡಿಗಳಿಗೆ ಮಾರಾಟ ಮಾಡಿದ್ದಾಗಿ ಭಂಗು ಒಪ್ಪಿಕೊಂಡಿದ್ದಾನೆ.

ವಶಪಡಿಸಿಕೊಂಡ ಮೊಬೈಲ್‌ಗಳಲ್ಲಿ 11 ಫೋನ್‌ಗಳು ಈಗಾಗಲೇ ನಗರದಾದ್ಯಂತ ದಾಖಲಾಗಿರುವ ವಿವಿಧ ಎಫ್‌ಐಆರ್‌ಗಳಿಗೆ ಸಂಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಶಪಡಿಸಿಕೊಂಡ ಭಾಗಗಳು ಕದ್ದ ಇತರ ಐಫೋನ್‌ಗಳದ್ದಾಗಿರಬಹುದು ಎಂದು ಶಂಕಿಸಲಾಗಿದೆ. ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಭಂಗು ಅವರನ್ನು ಈ ಹಿಂದೆ ಪಂಜಾಬ್‌ನ ಭಟಿಂಡಾದಲ್ಲಿ ದಾಖಲಾಗಿರುವ ಇದೇ ರೀತಿಯ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆ ಪ್ರಕರಣದಲ್ಲಿ ಸುಮಾರು 70 ಕದ್ದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಸಾಧನಗಳನ್ನು ಪೂರೈಸಿದ ಮಹಿಳೆಯನ್ನು ಗುರುತಿಸಲು ಮತ್ತು ಸಂಜೀವ್ ಕುಮಾರ್ ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.