ADVERTISEMENT

ಚಂದ್ರಬಾಬು ನಾಯ್ಡು ಬಂಧಿಸಿದ್ದ ಐಪಿಎಸ್ ಅಧಿಕಾರಿ ಸಂಜಯ್ ಅಮಾನತು; ದುರುಪಯೋಗ ಆರೋಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 14:33 IST
Last Updated 4 ಡಿಸೆಂಬರ್ 2024, 14:33 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ಅಮರಾವತಿ: ಕೌಶಲಾಭಿವೃದ್ಧಿ ಹಗರಣ ಪ್ರಕರಣದ ತನಿಖೆ ನಡೆಸಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದ ಸಿಐಡಿಯ ಹಿರಿಯ ಐಪಿಎಸ್ ಅಧಿಕಾರಿ ಎನ್. ಸಂಜಯ್ ಅವರನ್ನು ಸರ್ಕಾರಿ ಹಣ ದುರುಪಯೋಗ ಆರೋಪದಡಿ ಆಂಧ್ರಪ್ರದೇಶ ಸರ್ಕಾರ ಬುಧವಾರ ಅಮಾನತುಗೊಳಿಸಿದೆ.

ಸಂಜಯ್ ಅವರು ಸದ್ಯ ಆಂಧ್ರಪ್ರದೇಶದ ವಿಪತ್ತು ನಿರ್ವಹಣೆ ಹಾಗೂ ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕರಾಗಿದ್ದಾರೆ. ಟಿಡಿಪಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಮಾನತುಗೊಳ್ಳುತ್ತಿರುವ ನಾಲ್ಕನೇ ಐಪಿಎಸ್ ಅಧಿಕಾರಿ ಇವರಾಗಿದ್ದಾರೆ. 

ಇವರ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ವಿಚಕ್ಷಣ ಹಾಗೂ ಜಾರಿ ಇಲಾಖೆಯು ತನಿಖೆ ನಡೆಸಿದೆ ಎಂದು ಸರ್ಕಾರ ಹೊರಡಿಸಿರುವ ಅಮಾನತು ಆದೇಶದಲ್ಲಿ ಹೇಳಲಾಗಿದೆ. 1996ರ ತಂಡದ ಐಪಿಎಸ್‌ ಅಧಿಕಾರಿಯಾಗಿರುವ ಸಂಜಯ್‌, ಲ್ಯಾಪ್‌ಟಾಪ್ ಹಾಗೂ ಐಪ್ಯಾಡ್‌ಗಳನ್ನು ತ್ವರಿತವಾಗಿ ಖರೀದಿ ಮಾಡುವ ಸಂದರ್ಭದಲ್ಲಿ ಅವ್ಯವಹಾರ ನಡೆಸಿದ್ದಾರೆ. ಅಧಿಕಾರ ಹಾಗೂ ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಆ ಮೂಲಕ ಸಾರ್ವಜನಿಕರ ನಂಬಿಕೆಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ADVERTISEMENT

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಜಾಗೃತಿ ಮೂಡಿಸುವ ಕಾರ್ಯಾಗಾರವನ್ನು ಆಯೋಜಿಸಿದ್ದು, ಅದರಲ್ಲಿ ನಿಯಮಗಳನ್ನು ಪಾಲಿಸಿಲ್ಲ. ಜತೆಗೆ ಸಂಸ್ಥೆಯೊಂದರ ಜತೆ ಸೇರಿಕೊಂಡು ಅಕ್ರಮವಾಗಿ ₹1.15 ಕೋಟಿಯಷ್ಟು ಹೆಚ್ಚುವರಿ ಪಾವತಿ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ.

‘ವಿಚಕ್ಷಣ ಹಾಗೂ ಜಾರಿ ಇಲಾಖೆಯ ವರದಿಯನ್ನು ಕೂಲಂಕಷದಿಂದ ಪರಿಶೀಲಿಸಿ, ಎನ್‌. ಸಂಜಯ್ ಅವರು ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಹೀಗಾಗಿ ಇವರ ಮೇಲೆ ತನಿಖೆಯನ್ನು ಬಾಕಿ ಉಳಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ’ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಡಿಜಿ ಶ್ರೇಣಿಯ ಮೂವರು ಅಧಿಕಾರಿಗಳನ್ನು ಚಂದ್ರಬಾಬು ನಾಯ್ಡು ಸರ್ಕಾರ ಅಮಾನತುಗೊಳಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.