ಲಾಲು ಪ್ರಸಾದ್
– ಪಿಟಿಐ ಚಿತ್ರ
ನವದೆಹಲಿ: ಐಆರ್ಸಿಟಿಸಿಯಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ತನ್ನ, ಪತ್ನಿ ರಾಬ್ಡಿ ದೇವಿ, ಮಗ ತೇಜಸ್ವಿ ಪ್ರಸಾದ್ ಯಾದವ್ ಹಾಗೂ ಇತರ 11 ಮಂದಿ ವಿರುದ್ಧ ಆರೋಪ ಹೊರಿಸಲು ನಿರ್ದೇಶಿಸಿದ್ದ ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಸಲ್ಲಿಸಿರುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಇತ್ತೀಚೆಗೆ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠದ ಮುಂದೆ ಜನವರಿ 5 ರಂದು ವಿಚಾರಣೆಗೆ ಬರಲಿದೆ ಎಂದು ಕೋರ್ಟ್ ಮೂಲಗಳು ತಿಳಿಸಿವೆ.
ಈ ಹಿಂದೆ ಅಕ್ಟೋಬರ್ 13ರಂದು ಆರೋಪಿಗಳ ವಿರುದ್ಧ ಮೋಸ, ಕ್ರಿಮಿನಲ್ ಸಂಚು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಕೋರ್ಟ್ ದೋಷಾರೋಪಣೆ ನಿಗದಿ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಭೂಮಿ ಮತ್ತು ಷೇರು ವಹಿವಾಟುಗಳು ರಾಂಚಿ ಮತ್ತು ಪುರಿಯಲ್ಲಿರುವ ರೈಲ್ವೆ ಹೋಟೆಲ್‌ಗಳಲ್ಲಿ ಖಾಸಗೀಕರಣ ಮಾಡುವ ನೆಪದಲ್ಲಿ ಪೋಷಿಸಿದ ಬಂಡವಾಳಶಾಹಿಯ ಉದಾಹರಣೆ ಎಂದು ಅದು ಕಟುವಾಗಿ ನುಡಿದಿತ್ತು.
ಲಾಲು ಪ್ರಸಾದ್ ಜೊತೆಗೆ ಪ್ರದೀಪ್ ಕುಮಾರ್ ಗೋಯೆಲ್, ರಾಕೇಶ್ ಸಕ್ಸೇನಾ, ಭೂಪೇಂದ್ರ ಕುಮಾರ್ ಅಗರ್ವಾಲ್, ರಾಕೇಶ್ ಕುಮಾರ್ ಗೋಗಿಯಾ ಮತ್ತು ವಿನೋದ್ ಕುಮಾರ್ ಅಸ್ತಾನಾ ವಿರುದ್ಧ ನ್ಯಾಯಾಲಯವು ಭ್ರಷ್ಟಾಚಾರ ತಡೆ (ಪಿಸಿ) ಕಾಯ್ದೆಯ ಸೆಕ್ಷನ್ 13(1)(d)(ii) ಮತ್ತು (iii) ಸೆಕ್ಷನ್ 13(2) ಅಡಿಯಲ್ಲಿ ಆರೋಪ ನಿಗದಿ ಮಾಡಿತ್ತು.
ಲಾಲು ಪ್ರಸಾದ್, ರಾಬ್ಡಿ ದೇವಿ, ತೇಜಸ್ವಿ, ಮೆಸರ್ಸ್ ಲಾರಾ ಪ್ರಾಜೆಕ್ಟ್ಸ್ ಎಲ್‌ಎಲ್‌ಪಿ, ವಿಜಯ್ ಕೊಚ್ಚರ್, ವಿನಯ್ ಕೊಚ್ಚರ್, ಸರಳಾ ಗುಪ್ತಾ ಮತ್ತು ಪ್ರೇಮ್ ಚಂದ್ ಗುಪ್ತಾ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಆರೋಪ ಹೊರಿಸಬೇಕೆಂದು ನ್ಯಾಯಾಲಯ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.