ADVERTISEMENT

ರಿಯಲ್‌ ಎಸ್ಟೇಟ್‌ ಉದ್ಯಮಿ ಲಲಿತ್ ಗೋಯಲ್ ಬಂಧಿಸಿದ ಇ.ಡಿ

ಪಿಟಿಐ
Published 16 ನವೆಂಬರ್ 2021, 9:00 IST
Last Updated 16 ನವೆಂಬರ್ 2021, 9:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಐಆರ್‌ಇಒ ರಿಯಲ್‌ ಎಸ್ಟೇಟ್‌ ಸಮೂಹದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಲಲಿತ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿರುವುದಾಗಿ ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋಯಲ್‌ ಅವರನ್ನು ಚಂಡೀಗಡದಲ್ಲಿಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ(ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ, ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ತಿಳಿಸಿದರು.

ಅಮೆರಿಕಕ್ಕೆ ತೆರಳುತ್ತಿದ್ದ ಗೋಯಲ್ ಅವರನ್ನು ಇ.ಡಿ ಹೊರಡಿಸಿದ್ದ ಲುಕ್‌ಔಟ್‌ ನೋಟಿಸ್‌ ಆಧಾರದಲ್ಲಿ ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ಗುರುವಾರ ವಲಸೆ ವಿಭಾಗದ ಅಧಿಕಾರಿಗಳು ತಡೆಹಿಡಿದಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲೇ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ (ಪಿಎಂಎಲ್‌ಎ) ತನಿಖೆಗೆ ಒಳಪಡಿಸಲಾಯಿತು.

ADVERTISEMENT

ಗೋಯಲ್‌ ಅವರ ಸಹೋದರಿ ಬಿಜೆಪಿ ನಾಯಕ ಸುಧಾಂಶು ಮಿತ್ತಲ್ ಅವರನ್ನು ವಿವಾಹವಾಗಿದ್ದಾರೆ. ಗ್ರಾಹಕರು ಮನೆ ಖರೀದಿಗೆ ಪಾವತಿಸಿದ್ದ ಹಣ, ಹೂಡಿಕೆಗಳು ಮತ್ತು ಷೇರುಗಳಿಗೆ ಸಂಬಂಧಿಸಿದ ಸುಮಾರು ₹ 57.33 ಕೋಟಿಯನ್ನು (77 ಮಿಲಿಯನ್ ಡಾಲರ್) ಸಾಗರೋತ್ತರದಲ್ಲಿನ ಸಂಸ್ಥೆಗಳಿಗೆ ಅನ್ಯ ವಹಿವಾಟಿಗಾಗಿ ವರ್ಗಾಹಿಸಿದ್ದರು ಎಂಬ ಆರೋಪ ಇದೆ.

ಪಂಡೋರಾ ಪೇಪರ್ಸ್ ದಾಖಲೆ ಸೋರಿಕೆಯಲ್ಲಿಯೂ ಇವರ ಹೆಸರು ಕೇಳಿಬಂದಿತ್ತು. ಆದರೆ, ಗೋಯಲ್ ಮತ್ತು ಅವರ ಕಾನೂನು ಪರಿಣತರ ತಂಡದ ಸದಸ್ಯರು, ‘ಕಾಯ್ದೆ ಉಲ್ಲಂಘಿಸಿ ವಿದೇಶಗಳಿಗೆ ಯಾವುದೇ ಹಣ ವರ್ಗಾವಣೆ ಮಾಡಿಲ್ಲ’ ಎಂದು ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.