ADVERTISEMENT

ಕೇರಳ: ಈಗ ಸಿಪಿಎಂ, ಆಗ ಕಾಂಗ್ರೆಸ್‌ಗೆ ‘ನಂಟಿ’ನ ಸಂಕಟ

ಸಿ.ಎಂ ಚಾಂಡಿ ನೇತೃತ್ವದ ಸರ್ಕಾರಕ್ಕೆ ಆಗ ‘ಸೋಲಾರ್‌ ಪವರ್‌’ ಯೋಜನೆ ಬಿಸಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 12:40 IST
Last Updated 7 ಜುಲೈ 2020, 12:40 IST
ಉಮ್ಮನ್‌ ಚಾಂಡಿ
ಉಮ್ಮನ್‌ ಚಾಂಡಿ   

ತಿರುವನಂತಪುರ: ಚಿನ್ನದ ಕಳ್ಳ ಸಾಗಣೆಯಲ್ಲಿ ಯುಎಇ ಕಾನ್ಸುಲೇಟ್‌ ಕಚೇರಿಯ ಮಾಜಿ ಸಿಬ್ಬಂದಿ ಜೊತೆ ಶಾಮೀಲಾಗಿರುವ ಆರೋಪದ ಮೇಲೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್‌ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

ವಿರೋಧ ಪಕ್ಷ ಪಾಳೆಯಕ್ಕೆ ಸಹಜವಾಗಿಯೇ ಇದು ಹೊಸ ಅಸ್ತ್ರವೊಂದನ್ನು ಕೊಟ್ಟಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹಾಗೂ ಬಿಜೆಪಿ ವಾಗ್ದಾಳಿ ನಡೆಸುತ್ತಿವೆ.

ಆದರೆ, ಈ ಹಿಂದೆ ಯುಡಿಎಫ್‌ ಸರ್ಕಾರ ಇದ್ದಾಗ, ಇದೇ ರೀತಿ ಆರೋಪವೊಂದು ಮೈತ್ರಿಕೂಟದ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ ವಿರುದ್ಧವೂ ಕೇಳಿಬಂದಿತ್ತು. ಅಂದರೆ, ಅಧಿಕಾರಸ್ಥರೊಂದಿಗಿನ ನಂಟನ್ನು ದುರ್ಬಳಕೆ ಮಾಡಿಕೊಂಡಿರುವುದೇ ಪ್ರಮುಖ ಆರೋಪವಾಗಿತ್ತು. ವ್ಯತ್ಯಾಸ ಎಂದರೆ, ಚಿನ್ನದ ಕಳ್ಳ ಸಾಗಾಣಿಕೆ ಎಂಬುದು ಈಗಿನ ಆರೋಪ. ಆಗ, ಸೋಲಾರ್‌ ವಿದ್ಯುತ್‌ ಯೋಜನೆ ಹೆಸರಿನಲ್ಲಿ ಹಲವರಿಗೆ ವಂಚಿಸಿದ ಆರೋಪ.

ADVERTISEMENT

ಉಮ್ಮನ್‌ ಚಾಂಡಿ ಮುಖ್ಯಮಂತ್ರಿ ಆಗಿದ್ದರು. ಸೋಲಾರ್‌ ವಿದ್ಯುತ್‌ ಯೋಜನೆ ಅನುಷ್ಠಾನ ನೆಪದಲ್ಲಿ ಸರಿತಾ ನಾಯರ್‌ ಎಂಬುವವರು ಹಲವಾರು ಜನರಿಗೆ ವಂಚಿಸಿದ್ದರು ಎಂಬ ಆರೋಪ ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಸರಿತಾ ಅವರಿಗೆ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಯೊಬ್ಬರ ಜತೆ ಸಂಪರ್ಕ ಇತ್ತು. ಹೀಗಾಗಿ ಅಧಿಕಾರ ದುರ್ಬಳಕೆಯಾಗಿದೆ ಎಂಬ ಆರೋಪ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ಸದ್ಯ, ಚಿನ್ನದ ಕಳ್ಳ ಸಾಗಾಣಿಕೆ ಆರೋಪದ ಮೇಲೆ ಸ್ವಪ್ನಾ ಸುರೇಶ್‌ ಎಂಬುವವರನ್ನು ಕಸ್ಟಮ್ಸ್‌ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೊಂದಿಗೆ ಸರಿತಾ ಅವರು ಮಾತನಾಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

ಆಗಲೂ ಸಹ, ಆರೋಪಿ ಸ್ಥಾನದಲ್ಲಿದ್ದ ಸರಿತಾ ಅವರು ಆಗಿನ ಮುಖ್ಯಮಂತ್ರಿ ಚಾಂಡಿ ಅವರೊಂದಿಗೆ ಮಾತನಾಡುತ್ತಿದ್ದ ಚಿತ್ರಗಳು ವ್ಯಾಪಕವಾಗಿ ಹರಿದಾಡಿ, ಬಿರುಗಾಳಿಯನ್ನೇ ಎಬ್ಬಿಸಿದ್ದವು.

ಆಡಳಿತಾರೂಢ ಯುಡಿಎಫ್‌, ವಿರೋಧಿ ಬಣ ಎಲ್‌ಡಿಎಫ್‌ಗಳ ನಡುವೆ ತೀವ್ರ ವಾಕ್ಸಮರಕ್ಕೂ ಈ ವಿವಾದ ಕಾರಣವಾಗಿತ್ತು. ಸರಿತಾ ಅವರು ಚಾಂಡಿ ಹಾಗೂ ಇತರ ಕಾಂಗ್ರೆಸ್‌ ಮುಖಂಡರ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಇದನ್ನು ಖಂಡಿಸಿದ್ದ ಕಾಂಗ್ರೆಸ್, ಸರಿತಾ ಅವರಿಗೆ ಸಿಪಿಎಂ ಮುಖಂಡರೊಂದಿಗೆ ನಂಟಿದೆ. ಅವರನ್ನು ಬಳಸಿಕೊಂಡು ಪಕ್ಷಕ್ಕೆ ಮಸಿ ಬಳಿಯಲು ಸಿಪಿಎಂ ಪಿತೂರಿ ನಡೆಸಿದೆ ಎಂದು ತಿರುಗೇಟು ನೀಡಿತ್ತು. ಈ ಸಂಬಂಧದ ತನಿಖೆ ಇನ್ನೂ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.