ADVERTISEMENT

ದೆಹಲಿ: ಸಕ್ರಿಯ ಐಎಸ್‌ ಉಗ್ರನನ್ನು ಬಂಧಿಸಿದ ಎನ್‌ಐಎ

ಪಿಟಿಐ
Published 7 ಆಗಸ್ಟ್ 2022, 14:32 IST
Last Updated 7 ಆಗಸ್ಟ್ 2022, 14:32 IST
ಎನ್‌ಐಎ 
ಎನ್‌ಐಎ    

ನವದೆಹಲಿ: ‘ರಾಷ್ಟ್ರೀಯ ತನಿಖಾ ಸಂಸ್ಥೆಯವರು (ಎನ್‌ಐಎ) ಇಸ್ಲಾಮಿಕ್ ಸ್ಟೇಟ್‌ (ಐಎಸ್‌) ಉಗ್ರ ಸಂಘಟನೆಯ ಸದಸ್ಯನೊಬ್ಬನನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮೊಹ್ಸಿನ್‌ ಅಹ್ಮದ್‌ ಬಂಧಿತ. ಬಿಹಾರದ ಪಟ್ನಾದವನಾದ ಈತ ಬಾಟ್ಲಾ ಹೌಸ್‌ನಲ್ಲಿ ವಾಸವಿದ್ದ. ಆತನನ್ನು ಶನಿವಾರ ಬಂಧಿಸಲಾಗಿದೆ’ ಎಂದು ಎನ್‌ಐಎ ವಕ್ತಾರರೊಬ್ಬರು ಹೇಳಿದ್ದಾರೆ.

‘ಅಹ್ಮದ್‌, ಐಎಸ್‌ನ ಸಕ್ರಿಯ ಸದಸ್ಯನಾಗಿದ್ದ. ಭಾರತ ಹಾಗೂ ವಿದೇಶಗಳಲ್ಲಿ ನೆಲೆಸಿರುವವರಿಂದ ನಿಧಿ ಸಂಗ್ರಹಿಸುತ್ತಿದ್ದ ಈತ ಅದನ್ನು ಕ್ರಿಪ್ಟೊ ಕರೆನ್ಸಿ ರೂಪದಲ್ಲಿ ಸಿರಿಯಾ ಹಾಗೂ ಇತರ ದೇಶಗಳಿಗೆ ರವಾನಿಸುತ್ತಿದ್ದ. ಐಎಸ್ ಚಟುವಟಿಕೆಗಳನ್ನು ವಿಸ್ತರಿಸಲು ನೆರವಾಗುವ ಉದ್ದೇಶದಿಂದಲೇ ನಿಧಿ ಸಂಗ್ರಹಕ್ಕೆ ಮುಂದಾಗಿದ್ದ. ಆತನ ನಿವಾಸದಲ್ಲಿ ಶೋಧ ನಡೆಸಿದಾಗ ಐಎಸ್ ಸಂಘಟನೆಯೊಂದಿಗೆ ಆನ್‌ಲೈನ್‌ನಲ್ಲಿ ಸಂಪರ್ಕದಲ್ಲಿರುವುದು ಖಚಿತಪಟ್ಟಿತ್ತು. ಆತನ ವಿರುದ್ಧ ಜೂನ್‌ 25ರಂದು ಸುಮೊಟೊ ಪ್ರಕರಣ ದಾಖಲಿಸಲಾಗಿತ್ತು’ ಎಂದು ಅವರು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.