ADVERTISEMENT

ಬಾಂಗ್ಲಾ ಇಸ್ಕಾನ್‌ ದೇಗುಲಕ್ಕೆ ದುಷ್ಕರ್ಮಿಗಳಿಂದ ಬೆಂಕಿ

ದೇವರ ಮೂರ್ತಿಗಳು ಸುಟ್ಟು ಭಸ್ಮ: ರಾಧಾರಮಣ್‌ ದಾಸ್‌

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 11:49 IST
Last Updated 7 ಡಿಸೆಂಬರ್ 2024, 11:49 IST
.
.   

ಕೋಲ್ಕತ್ತ (ಪಿಟಿಐ): ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಇಸ್ಕಾನ್‌ ಕೇಂದ್ರಕ್ಕೆ ಶನಿವಾರ ಮುಂಜಾನೆ ಬೆಂಕಿ ಇಡಲಾಗಿದೆ ಎಂದು ಇಸ್ಕಾನ್‌ ಆರೋಪಿಸಿದೆ.

ಕೋಲ್ಕತ್ತದ ಇಸ್ಕಾನ್‌ನ ಉಪಾಧ್ಯಕ್ಷ ರಾಧಾರಮಣ್‌ ದಾಸ್‌ ಅವರು,‘ಸಮುದಾಯದ ಸದಸ್ಯರು ಮತ್ತು ವೈಷ್ಣವರನ್ನು ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ. ದೇಗುಲದ ಒಳಗೆ ನುಗ್ಗಿ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ ಮತ್ತು ಅವುಗಳಿಗೆ ಬೆಂಕಿ ಹಚ್ಚಲಾಗಿದೆ’ ಎಂದು ಹೇಳಿದ್ದಾರೆ.

‘ಢಾಕಾದಲ್ಲಿರುವ ಇಸ್ಕಾನ್‌ ದೇಗುಲದ ಶ್ರೀ ಲಕ್ಷ್ಮಿ ನಾರಾಯಣ ಮೂರ್ತಿ ಮತ್ತು ಇತರ ವಸ್ತುಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಶನಿವಾರ ಮುಂಜಾನೆ 2–3 ಗಂಟೆ ಸುಮಾರಿಗೆ ದುಷ್ಕರ್ಮಿಗಳು ರಾಧಾ ಕೃಷ್ಣ  ಮತ್ತು ಶ್ರೀ ಮಹಾಭಾಗ್ಯ ಲಕ್ಷ್ಮಿ ನಾರಾಯಣ ದೇಗುಲಕ್ಕೆ ಬೆಂಕಿ ಇಟ್ಟಿದ್ದಾರೆ. ಪೆಟ್ರೋಲ್‌ ಅಥವಾ ಯಾವುದೋ ರಾಸಾಯನಿಕ ಬಳಸಿ ದೇಗುಲಕ್ಕೆ ಬೆಂಕಿ ಇಡಲಾಗಿದೆ’ ಎಂದು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ADVERTISEMENT

ದಾಳಿಗಳ ಬಗ್ಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಗಮನಸೆಳೆಯುತ್ತಿರುವ ನಡುವೆಯೂ ಆಕ್ರಮಣಗಳು ಮುಂದುವರಿದಿವೆ. ಈ ಬಗ್ಗೆ ಪೊಲೀಸ್‌ ಮತ್ತು ಆಡಳಿತ ವ್ಯವಸ್ಥೆಯು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ  ಎಂದು ದೂರಿದ್ದಾರೆ.

‘ಭಾರತದ ಇಸ್ಕಾನ್‌, ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಹಾಗೂ ‘ತಿಲಕ’ ಇಡದಂತೆ ಮತ್ತು ಎಚ್ಚರಿಕೆಯಿಂದ ಆಚರಣೆಗಳನ್ನು ಆಚರಿಸುವಂತೆ ಭಕ್ತರು ಮತ್ತು ಅನುಯಾಯಿಗಳಿಗೆ ಕರೆ ನೀಡಿದೆ’ ಎಂದು ಅವರು ಇದಕ್ಕೂ ಮುನ್ನ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.