ADVERTISEMENT

ಭಾರಿ ತೂಕದ ಉಪಗ್ರಹ ಉಡ್ಡಯನಕ್ಕೆ ಇಸ್ರೊ ಸಜ್ಜು

ಶ್ರೀಹರಿಕೋಟದಲ್ಲಿ ಇಂದು ಉಡ್ಡಯನ * ಕ್ಷಣಗಣನೆ ಆರಂಭ

ಪಿಟಿಐ
Published 1 ನವೆಂಬರ್ 2025, 14:25 IST
Last Updated 1 ನವೆಂಬರ್ 2025, 14:25 IST
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ‘ಸಿಎಂಎಸ್‌–03’ ಸಂವಹನ ಉಪಗ್ರಹವನ್ನು ಇಸ್ರೊ ಭಾನುವಾರ ಉಡ್ಡಯನ ಮಾಡಲಿದ್ದು ಕ್ಷಣಗಣನೆ ಆರಂಭವಾಗಿದೆ –ಪಿಟಿಐ ಚಿತ್ರ 
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ‘ಸಿಎಂಎಸ್‌–03’ ಸಂವಹನ ಉಪಗ್ರಹವನ್ನು ಇಸ್ರೊ ಭಾನುವಾರ ಉಡ್ಡಯನ ಮಾಡಲಿದ್ದು ಕ್ಷಣಗಣನೆ ಆರಂಭವಾಗಿದೆ –ಪಿಟಿಐ ಚಿತ್ರ     

ಶ್ರೀಹರಿಕೋಟ (ಆಂಧ್ರ ಪ್ರದೇಶ): ಭಾರಿ ತೂಕದ ಸಂವಹನ ಉಪಗ್ರಹ ‘ಸಿಎಂಎಸ್‌–03’ ಅನ್ನು ಭಾನುವಾರ ಉಡ್ಡಯನ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಣಿಯಾಗಿದೆ.

ಉಪಗ್ರಹದ ತೂಕ 4,410 ಕೆ.ಜಿ ಇದ್ದು, ದೇಶದ ಬಾಹ್ಯಾಕಾಶ ಕೇಂದ್ರದಿಂದ ಇದೇ ಮೊದಲ ಬಾರಿಗೆ ಉಡ್ಡಯನ ಮಾಡಲಾಗುತ್ತಿರುವ ಭಾರಿ ತೂಕದ ಉಪಗ್ರಹ ಇದಾಗಿದೆ ಎಂದು ಇಸ್ರೊ ತಿಳಿಸಿದೆ.

ಶ್ರೀಹರಿಕೋಟದಲ್ಲಿರುವ ಉಡ್ಡಯನ ನೆಲೆಯಿಂದ ಭಾನುವಾರ (ನವೆಂಬರ್ 2) ಸಂಜೆ 5.26ಕ್ಕೆ ‘ಎಲ್‌ವಿಎಂ–ಎಂ5’ ರಾಕೆಟ್‌, ಈ ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಲಿದೆ. ಉಪಗ್ರಹವನ್ನು ಭೂಹೊಂದಾಣಿಕೆ ವರ್ಗಾವಣೆ ಕಕ್ಷೆಗೆ (ಜಿಯೊಸಿಂಕ್ರೊನಸ್ ಟ್ರಾನ್ಸ್‌ಫರ್‌ ಆರ್ಬಿಟ್‌–ಜಿಟಿಒ) ಸೇರಿಸಲಾಗುತ್ತದೆ ಎಂದು ತಿಳಿಸಿದೆ.

ADVERTISEMENT

‘ಲಾಂಚ್‌ ವೆಹಿಕಲ್ ಮಾರ್ಕ್–3 (ಎಲ್‌ವಿಎಂ–03) ಎತ್ತರ 43.5 ಮೀಟರ್‌ ಇದ್ದು, 4 ಸಾವಿರ ಕೆ.ಜಿಯಷ್ಟು ಭಾರದ ಸಾಧನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಈ ರಾಕೆಟ್‌ ಅನ್ನು ‘ಬಾಹುಬಲಿ’ ಎಂದೂ ಕರೆಯಲಾಗುತ್ತದೆ.

ಬಹುಬ್ಯಾಂಡ್‌ ಸಂವಹನ ಈ ಉಪಗ್ರಹದಿಂದ (ಸಿಎಂಎಸ್‌–03) ಸಾಧ್ಯವಾಗಲಿದೆ. ಸಾಗರಯಾನ ಕೈಗೊಳ್ಳುವವರಿಗೆ ಹಾಗೂ ಭೂಮೇಲ್ಮೈನಲ್ಲಿ ನಡೆಯುವ ಚಟುವಟಿಕೆಗಳಿಗೆ ಅಗತ್ಯವಿರುವ ಸಂವಹನ ಸೇವೆಯನ್ನು ಈ ಉಪಗ್ರಹ ಬಳಸಿ ನೀಡಲಾಗುತ್ತದೆ.

ಅಧಿಕ ಭಾರದ ಉಪಗ್ರಹಗಳನ್ನು ಹೊತ್ತು ಕಕ್ಷೆಯತ್ತ ಹಾರುವ ಸಾಮರ್ಥ್ಯದ ರಾಕೆಟ್‌ಗಳು ಇಸ್ರೊ ಬಳಿ ಇರಲಿಲ್ಲ. ಹೀಗಾಗಿ, ಜಿಸ್ಯಾಟ್‌–11 (5,854 ಕೆ.ಜಿ) ಉಪಗ್ರಹವನ್ನು 2018ರ ಡಿಸೆಂಬರ್ 5ರಂದು ಫ್ರೆಂಚ್‌ ಗಯಾನದಿಂದ ಉಡ್ಡಯನ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.