
ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಸಂಸ್ಥೆಯು, ಅಮೆರಿಕದ ಎಎಸ್‌ಟಿ ಸ್ಪೇಸ್‌ಮೊಬೈಲ್‌ನೊಂದಿಗಿನ ವಾಣಿಜ್ಯ ಒಪ್ಪಂದದ ಭಾಗವಾಗಿ, ಇದೇ 24ರಂದು ಎಲ್‌ವಿಎಂ 3 ಎಂ6 ಕ್ರಿಯಾಯೋಜನೆ ಮೂಲಕ ಅತ್ಯಾಧುನಿಕ ‘ಬ್ಲ್ಯೂಬರ್ಡ್ ಬ್ಲಾಕ್–2’ ಉಪಗ್ರಹವನ್ನು ಕಕ್ಷೆಗೆ ಕಳುಹಿಸಲಿದೆ.
ಈ ಐತಿಹಾಸಿಕ ಕ್ರಿಯಾಯೋಜನೆಯಲ್ಲಿ ಕಕ್ಷೆಗೆ ತಲುಪಲಿರುವ ಮುಂದಿನ ತಲೆಮಾರಿನ ಸಂವಹನ ಉಪಗ್ರಹವು ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಹೈ ಸ್ಪೀಡ್ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ಪೂರೈಸುವ ಸಾಮರ್ಥ್ಯ ಹೊಂದಿದೆ.
ಎಎಸ್‌ಟಿ ಸ್ಪೇಸ್‌ಮೊಬೈಲ್ ಕಂಪನಿ, ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ನಿರ್ಮಿಸುತ್ತಿದೆ. ಇದನ್ನು ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಳಕೆ ಮಾಡಬಹುದು. ಇದನ್ನು ಸರ್ಕಾರಿ ಮತ್ತು ವಾಣಿಜ್ಯ ಸೇವೆಗಳ ಅಪ್ಲಿಕೇಶನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
‘ಜಗತ್ತಿನಲ್ಲಿರುವ ಸುಮಾರು 600 ಕೋಟಿ ಮೊಬೈಲ್ ಫೋನ್ ಚಂದಾದಾರರು ಎದುರಿಸುತ್ತಿರುವ ಸಂಪರ್ಕ ಸಮಸ್ಯೆಯನ್ನು ನಿವಾರಿಸುವ ಮತ್ತು ಸಂಪರ್ಕರಹಿತವಾಗಿ ಉಳಿದಿರುವ ಶತಕೋಟಿ ಜನರಿಗೆ ಬ್ರ್ಯಾಂಡ್‌ಬ್ಯಾಂಡ್ ಕಲ್ಪಿಸುವ ಉದ್ದೇಶ ಹೊಂದಿದ್ದೇವೆ’ ಎಂದು ಎಎಸ್‌ಟಿ ಸ್ಪೇಸ್‌ಮೊಬೈಲ್ ಕಂಪನಿಯು ತನ್ನ ಜಾಲತಾಣದಲ್ಲಿ ತಿಳಿಸಿದೆ.