ADVERTISEMENT

ಬಿಬಿಸಿಗೆ ಐ.ಟಿ ಪರಿಶೀಲನೆ ಬಿಸಿ

‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಸಾಕ್ಷ್ಯಚಿತ್ರ ಪ್ರಸಾರವಾದ ವಾರಗಳ ಬಳಿಕ ಕಾರ್ಯಾಚರಣೆ

ಪಿಟಿಐ
Published 14 ಫೆಬ್ರುವರಿ 2023, 20:57 IST
Last Updated 14 ಫೆಬ್ರುವರಿ 2023, 20:57 IST
ಬಿಬಿಸಿ ಕಚೇರಿಯಲ್ಲಿ ಐಟಿ ಪರಿಶೀಲನೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಟ್ಟಡದ ಆವರಣದ ಹೊರಗಡೆ ಮಾಧ್ಯಮದವರು ಜಮಾಯಿಸಿದ್ದರು –ಪಿಟಿಐ ಚಿತ್ರ
ಬಿಬಿಸಿ ಕಚೇರಿಯಲ್ಲಿ ಐಟಿ ಪರಿಶೀಲನೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಟ್ಟಡದ ಆವರಣದ ಹೊರಗಡೆ ಮಾಧ್ಯಮದವರು ಜಮಾಯಿಸಿದ್ದರು –ಪಿಟಿಐ ಚಿತ್ರ   

ನವದೆಹಲಿ : ಆದಾಯ ತೆರಿಗೆ (ಐ.ಟಿ) ಇಲಾಖೆಯು ಬ್ರಿಟಿಷ್‌ ಬ್ರಾಡ್‌ ಕಾಸ್ಟಿಂಗ್‌ ಕಾರ್ಪೊರೇಷನ್‌ನ (ಬಿಬಿಸಿ) ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಮಂಗಳವಾರ ‘ಪರಿಶೀಲನೆ’ ನಡೆಸಿದೆ. ತೆರಿಗೆ ವಂಚನೆಯ ಆರೋಪದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐ.ಟಿ ಇಲಾಖೆಯ ಈ ಕಾರ್ಯಾ ಚರಣೆಯು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಬಿಬಿಸಿಯು ಭಾರತದ ಬಗ್ಗೆ ‘ವಿಷಪೂರಿತ ವರದಿ ಗಾರಿಕೆ’ ಮಾಡಿದೆ ಎಂದು ಬಿಜೆ‍ಪಿ ಆರೋಪಿಸಿದೆ. ಜಗತ್ತಿನ ಅತ್ಯಂತ ಭ್ರಷ್ಟ ಸಂಸ್ಥೆ ಎಂದಿದೆ. ‘ಪರಿಶೀಲನೆ’ಯ ಸಂದರ್ಭವನ್ನು ವಿರೋಧ ಪಕ್ಷಗಳು ಪ್ರಶ್ನಿ ಸಿವೆ. ಮಾಧ್ಯಮ ಸ್ವಾತಂತ್ರ್ಯದ ದಮನ ಎಂದು ಹೇಳಿವೆ.

2002ರ ಗುಜರಾತ್‌ ಗಲಭೆ ಮತ್ತು ಆಗ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ ಕುರಿತ ಸಾಕ್ಷ್ಯಚಿತ್ರವನ್ನು ಬಿಬಿಸಿ ಇತ್ತೀಚೆಗೆ ಪ್ರಸಾರ ಮಾಡಿತ್ತು. ಅದಾಗಿ ಕೆಲವೇ ವಾರಗಳಲ್ಲಿ ಐ.ಟಿ ಕಾರ್ಯಾಚರಣೆ ನಡೆದಿದೆ.

ADVERTISEMENT

ಅಧಿಕಾರಿಗಳ ಜೊತೆಗೆ ಸಂಪೂರ್ಣ ಸಹಕರಿಸುವುದಾಗಿ ಬಿಬಿಸಿ ಹೇಳಿದೆ. ಈಗ ಸೃಷ್ಟಿಯಾಗಿರುವ ಸಮಸ್ಯೆಯು ಆದಷ್ಟು ಬೇಗನೆ ಪರಿಹಾರವಾಗುವ ಭರವಸೆ ಇದೆ ಎಂದೂ ಹೇಳಿದೆ.

ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಬೆಳಿಗ್ಗೆ 11 ಗಂಟೆಗೆ ಏಕಕಾಲದಲ್ಲಿ ದಿಢೀರ್‌ ಕಾರ್ಯಾಚರಣೆ ಆರಂಭಗೊಂಡಿತು. ತಡಸಂಜೆಯವರೆಗೂ ‘ಪ‍ರಿಶೀಲನೆ’ ನಡೆಯಿತು. ತಮ್ಮ ಮೊಬೈಲ್‌ ಫೋನ್‌ಗಳನ್ನು ನಿರ್ದಿಷ್ಟ ಜಾಗದಲ್ಲಿ ಇರಿಸುವಂತೆ ಬಿಬಿಸಿ ಸಿಬ್ಬಂದಿಗೆ ಹೇಳಲಾಯಿತು. ಕಚೇರಿಯಲ್ಲಿದ್ದ ಮೊಬೈಲ್‌ ಫೋನ್‌ಗಳಲ್ಲಿ ಇದ್ದ ದತ್ತಾಂಶಗಳನ್ನು ಬೇರೆ ಮೊಬೈಲ್‌ ಫೋನ್‌ಗಳಿಗೆ ನಕಲು ಮಾಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಐ.ಟಿ ಕಾರ್ಯಾಚರಣೆಯ ಸುದ್ದಿ ಹರಡುತ್ತಿದ್ದಂತೆಯೇ ಜನರು ಮತ್ತು ಮಾಧ್ಯಮ ಸಿಬ್ಬಂದಿ ದೆಹಲಿ ಮತ್ತು ಮುಂಬೈ ಕಚೇರಿಗಳ ಮುಂದೆ ಜಮಾ
ಯಿಸಿದರು. ಉದ್ಯಮ ಸಂಸ್ಥೆಯ ಕಚೇರಿಯಲ್ಲಿ ಮಾತ್ರ ‘ಪರಿಶೀಲನೆ’ ನಡೆಸಲಾಗುತ್ತದೆ. ಸಂಸ್ಥೆಯ ಪ್ರವರ್ತಕರು ಅಥವಾ ನಿರ್ದೇಶಕರ ಮನೆಗಳಲ್ಲಿ ಪರಿಶೀಲನೆಗೆ ಅವಕಾಶ ಇಲ್ಲ.

‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಕಳೆದ ವಾರ ವಜಾ ಮಾಡಿತ್ತು. ಈ ಅರ್ಜಿಯು ಸಂಪೂರ್ಣವಾಗಿ ತಪ್ಪು ಗ್ರಹಿಕೆಯಿಂದ ಕೂಡಿದೆ ಮತ್ತು ಹುರುಳಿಲ್ಲದ್ದು ಎಂದು ಹೇಳಿತ್ತು.

ಆರೋಪಗಳೇನು?

ಅಂತರರಾಷ್ಟ್ರೀಯ ತೆರಿಗೆ ಪಾವತಿ, ಬಿಬಿಸಿಯ ಅಂಗ ಸಂಸ್ಥೆ ಗಳಿಗೆ ಸರಕು, ಸೇವೆ ಅಥವಾ ಸಿಬ್ಬಂದಿ ‘ವರ್ಗಾವಣೆ ವೆಚ್ಚ’ ಕುರಿತಂತೆ ಅಕ್ರಮ ನಡೆದಿದೆಯೇ ಎಂಬುದನ್ನು ಪರಿಶೀಲಿಸುವುದು ಆದಾಯ ತೆರಿಗೆ ಇಲಾಖೆಯ ಉದ್ದೇಶವಾಗಿತ್ತು.

ಲಂಡನ್‌ ಕೇಂದ್ರ ಸ್ಥಾನವಾಗಿರುವ ಬಿಬಿಸಿ ಮತ್ತು ಅದರ ಭಾರತೀಯ ಅಂಗ ಸಂಸ್ಥೆಯ ವಹಿವಾಟುಗಳಿಗೆ ಸಂಬಂಧಿಸಿ ಐ.ಟಿ ಇಲಾಖೆಯು ಪರಿಶೀಲನೆ ನಡೆಸಿದೆ.

ವಿರೋಧ ಪಕ್ಷಗಳು ಮತ್ತು ಮಾಧ್ಯಮದ ಮೇಲೆ ದಾಳಿ ನಡೆಸಲು ಸಂಸ್ಥೆಗಳನ್ನು ಬಳಸಿಕೊಂಡರೆ ಪ್ರಜಾಪ್ರಭುತ್ವ ಉಳಿಯದು. ಜನರು ಇದನ್ನು ಪ್ರತಿರೋಧಿಸಲಿದ್ದಾರೆ.

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

ಮೊದಲಿಗೆ ಬಿಬಿಸಿ ಸಾಕ್ಷ್ಯಚಿತ್ರದ ಮೇಲೆ ನಿರ್ಬಂಧ. ಅದಾನಿ ಪ್ರಕರಣದಲ್ಲಿ ಜೆಪಿಸಿ ಇಲ್ಲ, ಈಗ ಬಿಬಿಸಿ ಮೇಲೆ ಐ.ಟಿ ದಾಳಿ. ಭಾರತ: ಪ್ರಜಾಪ್ರಭುತ್ವದ ತಾಯಿಯೇ?

-ಸೀತಾರಾಮ್‌ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.