ADVERTISEMENT

ದೇಶದಲ್ಲಿ ಆರೋಗ್ಯ ತುರ್ತುಸ್ಥಿತಿ: ‘ಸುಪ್ರೀಂ’ ಕಳವಳ

ಕೋವಿಡ್‌ ನಿರ್ವಹಣೆ: ಆಮ್ಲಜನಕ, ಔಷಧ, ಲಸಿಕೆ ಪೂರೈಕೆಗೆ ರಾಷ್ಟ್ರೀಯ ನೀತಿ ರೂಪಿಸಲು ಕೇಂದ್ರಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 21:34 IST
Last Updated 22 ಏಪ್ರಿಲ್ 2021, 21:34 IST
   

ನವದೆಹಲಿ: ಕೋವಿಡ್‌–19 ಪಿಡುಗಿನಿಂದಾಗಿ ದೇಶದಲ್ಲಿ ‘ಆಘಾತಕಾರಿ’ ಸ್ಥಿತಿ ಇದೆ. ‘ರಾಷ್ಟ್ರೀಯ ತುರ್ತುಸ್ಥಿತಿ’ಯಂತೆ
ಕಾಣಿಸುತ್ತಿದೆ. ಆಮ್ಲಜನಕ, ಅಗತ್ಯ ಔಷಧಗಳು ಮತ್ತು ಲಸಿಕೆ ಪೂರೈಕೆಗೆ ಕೇಂದ್ರವು ರಾಷ್ಟ್ರೀಯ ಯೋಜನೆಯೊಂದನ್ನು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ಸ್ವಯಂ ಪ್ರೇರಣೆಯಿಂದ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ನ್ಯಾಯಾಲಯಕ್ಕೆ ವಿಚಾರಣೆಯಲ್ಲಿ ನೆರವು ನೀಡಲು ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರನ್ನು (ಅಮಿಕಸ್‌ ಕ್ಯೂರಿ) ನೇಮಿಸಲಾಗಿದೆ.

ಲಾಕ್‌ಡೌನ್‌ ಹೇರುವ ಅಧಿಕಾರವು ರಾಜ್ಯ ಸರ್ಕಾರಗಳ ಬಳಿಯಲ್ಲಿ ಇರಬೇಕು ಎಂದು ತಾನು ಬಯಸುವುದಾಗಿಯೂ ಪೀಠ ಹೇಳಿದೆ. ಉತ್ತರ ಪ್ರದೇಶದ ಐದು ನಗರಗಳ ಮೇಲೆ ಲಾಕ್‌ಡೌನ್‌ ರೀತಿಯ ನಿರ್ಬಂಧ ಹೇರಲು ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ನಿರ್ದೇಶನವನ್ನು ಪೀಠವು ಉಲ್ಲೇಖಿಸಿದೆ. ಬೊಬಡೆ ಅವರ ಕರ್ತವ್ಯದ ಕೊನೆಯ ದಿನಕ್ಕಿಂತ ಒಂದು ದಿನ ಮೊದಲು ಈ ವಿಚಾರಣೆ ನಡೆದಿದೆ. ಅವರು ಶುಕ್ರವಾರ ನಿವೃತ್ತರಾಗಲಿದ್ದಾರೆ.

ADVERTISEMENT

ಕೋವಿಡ್‌ ನಿರ್ವಹಣೆ, ಆಮ್ಲಜನಕ ಪೂರೈಕೆ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಗೆ ಸಂಬಂಧಿಸಿ ವಿವಿಧ ಹೈಕೋರ್ಟ್‌ಗಳು ವಿಚಾರಣೆ ನಡೆಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ದೆಹಲಿ, ಬಾಂಬೆ, ಅಲಹಾಬಾದ್‌, ಕಲ್ಕತ್ತ,
ಮಧ್ಯಪ್ರದೇಶ ಮತ್ತು ಸಿಕ್ಕಿಂ ಹೈಕೋರ್ಟ್‌ಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಹಾಗಾಗಿ, ಕೆಲವು ವಿಚಾರಗಳ ಬಗ್ಗೆ ಸ್ವಯಂ ಪ್ರೇರಿತ
ವಾಗಿ ವಿಚಾರಣೆಗೆ ನಿರ್ಧರಿಸಲಾಗಿದೆ. ಹೈಕೋರ್ಟ್‌ಗಳು ಜನರ ಹಿತಾಸಕ್ತಿ
ಯಿಂದ ತಮ್ಮ ಕೆಲಸ ನಿರ್ವಹಿಸುತ್ತಿವೆ. ಆದರೆ, ಅದು ಗೊಂದಲಕ್ಕೆ ಮತ್ತು ಸಂಪನ್ಮೂಲದ ಅನಗತ್ಯ ಬಳಕೆಗೆ ಕಾರಣವಾಗುತ್ತದೆ ಎಂದು ಪೀಠವು ಹೇಳಿದೆ.

ಸುಪ್ರೀಂ ಕೋರ್ಟ್‌ನ ಈ ನಿಲುವನ್ನು ಹಿರಿಯ ವಕೀಲರಲ್ಲಿ ಹಲವರು ಟೀಕಿಸಿದ್ದಾರೆ. ‘ರಾಜ್ಯಗಳ ಆಡಳಿತ ವ್ಯವಸ್ಥೆಗಳು ಹಲವು ಕೊರತೆಗಳನ್ನು ಹೊಂದಿವೆ. ಸ್ಥಳೀಯ ಮಟ್ಟದ ಸಮಸ್ಯೆಗಳ ಬಗ್ಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿಯೇ ಹೈಕೋರ್ಟ್‌ಗಳು ವಿಚಾರಣೆ ನಡೆಸುತ್ತಿವೆ’ ಎಂದು ಹಿರಿಯ ವಕೀಲ ವಿಕಾಸ್‌ ಸಿಂಗ್‌ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ನಿಲುವಿನ ವಿರುದ್ಧ ಅವರು ಅರ್ಜಿಯನ್ನೂ ಸಲ್ಲಿಸಿದ್ದಾರೆ.

‘ಒಬ್ಬ ಅಮಿಕಸ್‌ ಕ್ಯೂರಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶದಿಂದ ಮಾಹಿತಿ ಪಡೆದು ಸುಪ್ರೀಂ ಕೋರ್ಟ್‌ಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಲ್ಲಿಸಲು ಹೇಗೆ ಸಾಧ್ಯ? ಇದು ಹತಾಶೆ ಹುಟ್ಟಿಸುತ್ತಿದೆ’ ಎಂದು ಹಿರಿಯ ವಕೀಲ ರವೀಂದ್ರ ಶ್ರೀವಾಸ್ತವ ಹೇಳಿದ್ದಾರೆ.

‘ರಾಷ್ಟ್ರಮಟ್ಟದಲ್ಲಿ ಕೋವಿಡ್‌ ತುರ್ತುಸ್ಥಿತಿ ಮತ್ತು ಆಮ್ಲಜನಕ ತುರ್ತುಸ್ಥಿತಿ ಬಗ್ಗೆ ಕೇಂದ್ರದಿಂದ ಉತ್ತರ ಪಡೆಯುವುದು ಸುಪ್ರೀಂ ಕೋರ್ಟ್‌ನ ಕೆಲಸ. ರಾಜ್ಯ ಮಟ್ಟದಲ್ಲಿ ನಿಗಾ ಇರಿಸುವ ಕೆಲಸವನ್ನು ಹೈಕೋರ್ಟ್‌ಗಳಿಗೆ ಬಿಟ್ಟುಬಿಡಬೇಕು. ರಾಜ್ಯಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಮನ ಹರಿಸಲು ಸುಪ್ರೀಂ ಕೋರ್ಟ್‌ಗೆ ಸಮಯವೂ ಇಲ್ಲ, ಅದರ ವಿವರಗಳೂ ಗೊತ್ತಿಲ್ಲ. ಹೈಕೋರ್ಟ್‌ ಆದೇಶಗಳ ಬಗ್ಗೆ ಜನರಿಗೆ ವಿಶ್ವಾಸ ಇದೆ’ ಎಂದು ಹಿರಿಯ ವಕೀಲ ಮತ್ತು ಕಾಂಗ್ರೆಸ್‌ ಸಂಸದ ವಿವೇಕ ತಂಕಾ ಹೇಳಿದ್ದಾರೆ.

‘ಹಂಚಿಕೆಯಲ್ಲಿ ಸಮಾನತೆ ಇರಲಿ’:

ವೈದ್ಯಕೀಯ ಆಮ್ಲಜನಕ, ಔಷಧಗಳು ಹಾಗೂ ಅಗತ್ಯ ಸೇವೆಗಳ ಪೂರೈಕೆಯು ವೈದ್ಯಕೀಯ ಪ್ರಾಧಿಕಾರಗಳ ಸಲಹೆಯಂತೆ ಸಮಾನತೆಯ ನೆಲೆಯಲ್ಲಿ ನಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ದೇಶದ ವಿವಿಧ ಭಾಗಗಳಲ್ಲಿ ವಿಷಮ ಸ್ಥಿತಿ ಇದೆ. ಕೋವಿಡ್‌ ಪ್ರಕರಣಗಳು ಮತ್ತು ಮರಣ ಪ್ರಮಾಣ ದಿಢೀರ್‌ ಏರಿಕೆಯಾಗಿದೆ. ಲಸಿಕೆಯನ್ನು ಬಿಟ್ಟರೆ ರೆಮ್‌ಡಿಸಿವಿರ್‌ನಂತಹ ಕೆಲವೇ ಔಷಧಗಳಿಂದ ಮಾತ್ರ ಚಿಕಿತ್ಸೆ ಸಾಧ್ಯ. ಆಮ್ಲಜನಕ ಪೂರೈಕೆ ಕೂಡ ಚಿಕಿತ್ಸೆಯ ಅಗತ್ಯ ಭಾಗ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠ ಹೇಳಿದೆ.

ಆಮ್ಲಜನಕ, ಇತರ ಅಗತ್ಯ ಔಷಧಗಳು ಮತ್ತು ಲಸಿಕೆ ನೀಡಿಕೆ ವಿಚಾರದಲ್ಲಿ ಏಕರೂಪದ ಆದೇಶವನ್ನು ಏಕೆ ಹೊರಡಿಸಬಾರದು ಎಂಬ ಬಗ್ಗೆ ಶುಕ್ರವಾರದೊಳಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಹಾಗೂ ರಾಜ್ಯಗಳಿಗೆ ಪೀಠವು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.