ADVERTISEMENT

ಅಶೋಕ್ ಗೆಹ್ಲೋಟ್‌ಗೆ ರಾಜಸ್ಥಾನ ಒಲಿಯುವ ಸಾಧ್ಯತೆ ಹೆಚ್ಚು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 14:19 IST
Last Updated 13 ಡಿಸೆಂಬರ್ 2018, 14:19 IST
   

ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿರುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಸಚಿನ್‌ ಪೈಲಟ್‌ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರೊಂದಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸಿದರು. ಅಶೋಕ್ ಗೆಹ್ಲೋಟ್ ಅವರಿಗೆ ಪಕ್ಷವು ಮುಖ್ಯಮಂತ್ರಿ ಸ್ಥಾನ ಒಪ್ಪಿಸುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯ ಕಾಂಗ್ರೆಸ್ ಉನ್ನತ ವಲಯದಲ್ಲಿ ವ್ಯಕ್ತವಾಗಿದೆ.

ಗೆಹ್ಲೋಟ್‌ ಹಾಗೂ ಪೈಲಟ್‌ ಅವರೊಂದಿಗೆ ತಲಾ 15 ನಿಮಿಷಗಳ ಕಾಲ ರಾಹುಲ್ ಮಾತುಕತೆ ನಡೆಸಿದರು. ಇಬ್ಬರೂ ನಾಯಕರು ಮುಖ್ಯಮಂತ್ರಿ ಹುದ್ದೆಯ ಬೇಡಿಕೆ ಇಟ್ಟಿದ್ದಾರೆ. ರಾಜಸ್ಥಾನ ಚುನಾವಣಾ ಉಸ್ತುವಾರಿ ಅವಿನಾಶ್‌ ಪಾಂಡೆ ಹಾಗೂ ಕೆ.ಸಿ. ವೇಣುಗೋಪಾಲ್‌ ಅವರೊಂದಿಗೂ ರಾಹುಲ್‌ ಮಾತುಕತೆ ನಡೆಸಿದರು. ಸೋನಿಯಾ ಗಾಂಧಿ, ಪ್ರಿಯಾಂಕ ವದ್ರಾ ಸಹ ರಾಹುಲ್ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ.

ರಾಹುಲ್ ಭೇಟಿಯ ನಂತರ ಸಚಿನ್ ಪೈಲಟ್ ಜೈಪುರಕ್ಕೆ ತೆರಳಿದರು. ಆದರೆ ಅಶೋಕ್ ಗೆಹ್ಲೋಟ್ ಅವರನ್ನು ದೆಹಲಿ ವಿಮಾನ ನಿಲ್ದಾಣದಿಂದ ರಾಹುಲ್ ಗಾಂಧಿ ವಾಪಸ್ ಕರೆಸಿಕೊಂಡರು ಎಂದು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ADVERTISEMENT

ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್‌ ತಮ್ಮ ಬೆಂಬಲಿಗರಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಶೀಘ್ರ ಮುಖ್ಯಮಂತ್ರಿ ಹೆಸರು ಘೋಷಣೆ: ರಾಜಸ್ಥಾನದಲ್ಲಿ ಬಿಗಿಭದ್ರತೆ

ಜೈಪುರ ವರದಿ: ಮುಖ್ಯಮಂತ್ರಿ ಗಾದಿಗೆ ಯುವ ನೇತಾರ ಸಚಿನ್ ಪೈಲಟ್ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವೆ ಪೋಟಾಪೋಟಿ ಮುಂದುವರಿದಿದೆ. ಕಾಂಗ್ರೆಸ್ ಹೈಕಮಾಂಡ್ ಶೀಘ್ರ ಮುಖ್ಯಮಂತ್ರಿ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಸಂಭಾವ್ಯ ಹಿಂಸಾಚಾರ ತಡೆಯಲು ರಾಜ್ಯದಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ.

ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲಟ್ ಮನೆಗಳ ಎದುರು ಬೆಂಬಲಿಗರು ಮುಂಜಾನೆಯಿಂದಲೇ ಗುಂಪುಗೂಡುತ್ತಿದ್ದಾರೆ. ‘ಎರಡೂ ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತೆಯನ್ನು ಹೆಚ್ಚಿಸಲಾಗಿದೆ’ ಎಂದು ಜೈಪುರದ ಹೆಚ್ಚುವರಿ ಪೊಲೀಸ್ ಕಮಿಷನರ್ ನಿತಿನ್‌ದೀಪ್ ಬ್ಲುಗ್ಗನ್ ಹೇಳಿದ್ದಾರೆ.

ನೆಚ್ಚಿನ ನಾಯಕರ ಮನೆಗಳ ಎದುರು ಮಾತ್ರವೇ ಅಲ್ಲ, ಪಕ್ಷದ ರಾಜ್ಯ ಘಟಕದ ಪ್ರಧಾನ ಕಚೇರಿ ಎದುರೂ ಕಾರ್ಯಕರ್ತರು ಜಮಾಯಿಸಿದ್ದಾರೆ. ‘ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ನಮ್ಮಲ್ಲೂ ಇದೆ. ಈ ಕ್ಷಣಕ್ಕೆ ಏನೂ ಹೇಳಲು ಆಗದು. ಪಕ್ಷದ ಅಧ್ಯಕ್ಷರ ನಿರ್ಧಾರವೇ ಅಂತಿಮ’ ಎಂದು ಶಾಸಕ ರಘು ಶರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.