ADVERTISEMENT

ಭಯೋತ್ಪಾದನೆ ಪ್ರಕರಣ: ಶ್ರೀನಗರದಲ್ಲಿ 9 ಕಡೆ ಎನ್‌ಐಎ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2024, 5:37 IST
Last Updated 22 ಏಪ್ರಿಲ್ 2024, 5:37 IST
<div class="paragraphs"><p>ಎನ್‌ಐಎ (ಸಂಗ್ರಹ ಚಿತ್ರ)</p></div>

ಎನ್‌ಐಎ (ಸಂಗ್ರಹ ಚಿತ್ರ)

   

ಶ್ರೀನಗರ: ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಸೋಮವಾರ ಜಮ್ಮು ಮತ್ತು ಕಾಶ್ಮೀರ, ಶ್ರೀನಗರದ ಒಂಬತ್ತು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ಭದ್ರತಾ ಪಡೆಯ ಸಿಬ್ಬಂದಿಯನ್ನು ದಾಳಿ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ADVERTISEMENT

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳಾದ ಲಷ್ಕರ್ ಎ ತಯಬಾ, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್, ಅಲ್ ಬದರ್, ಅಲ್ ಖೈದಾಗಳು ರೂಪಿಸಿರುವ ವಿಧ್ವಂಸಕ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೊಸದಾಗಿ ರೂಪುಗೊಂಡಿರುವ ರೆಸಿಸ್ಟೆನ್ಸ್ ಫ್ರಂಟ್, ಯುನೈಟೆಡ್ ಲಿಬರೇಶನ್ ಫ್ರಂಟ್ ಜಮ್ಮು ಮತ್ತು ಕಾಶ್ಮೀರ, ಮುಜಾಹಿದ್ದೀನ್ ಗಜ್ಞಾತ್ ಉಲ್ ಹಿಂದ್, ಜಮ್ಮು ಮತ್ತು ಕಾಶ್ಮೀರ ಫ್ರೀಡಂ ಫೈಟರ್ಸ್, ಕಾಶ್ಮೀರ್ ಟೈಗರ್ಸ್ ಸಂಚುಗಳನ್ನು ಭೇದಿಸುವ ನಿಟ್ಟಿನಲ್ಲಿ ಎಎನ್‌ಐ ಕಾರ್ಯಾಚರಣೆ ನಡೆಸುತ್ತಿದೆ.

ಈ ಪ್ರದೇಶದಲ್ಲಿ ಉಗ್ರಗಾಮಿ ಸಂಘಟನೆಗಳಿಂದ ನೇಮಕಗೊಂಡಿದ್ದ ಕೆಲವರು ಬಾಂಬ್‌ಗಳು/ಮ್ಯಾಗ್ನೆಟಿಕ್ ಬಾಂಬ್‌ಗಳು, ಐಇಡಿಗಳು, ನಿಧಿಗಳು, ಮಾದಕ ವಸ್ತುಗಳು ಮತ್ತು ಮದ್ದುಗುಂಡುಗಳ ಮತ್ತು ಇತರ ವಸ್ತುಗಳ ಸಂಗ್ರಹಣೆ , ವಿತರಣೆ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಎನ್‌ಐಎ 2022ರ ಜೂನ್‌ನಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಭಯೋತ್ಪಾದನೆಯನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ತಮ್ಮ ಸಂಘಟಕರಿಗೆ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಮಾದಕ ದ್ರವ್ಯಗಳು ಇತ್ಯಾದಿಗಳನ್ನು ತಲುಪಿಸಲು ಡ್ರೋನ್‌ಗಳನ್ನು ಬಳಸುತ್ತಿವೆ ಎಂದು ತನಿಖಾ ಸಂಸ್ಥೆ ಬಹಿರಂಗಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.