ವೈ.ಎಸ್. ಜಗನ್ ಮೋಹನ್ ರೆಡ್ಡಿ
ಅಮರಾವತಿ: ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ನಂದ್ಯಾಲ್ ಜಿಲ್ಲೆಯ ನಲ್ಲಮಲ ಅರಣ್ಯ ವ್ಯಾಪ್ತಿಯ ಕಾಶಿನಯನ ಕ್ಷೇತ್ರವನ್ನು ಇತ್ತೀಚೆಗೆ ಧ್ವಂಸಗೊಳಿಸಲಾಗಿದೆ. ಹಿಂದೂ ಧರ್ಮವು ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ಅಧಿಕಾರಾವಧಿಯಲ್ಲಿ, ದೇವಾಲಯದ ಭೂಮಿಯನ್ನು ರಕ್ಷಿಸಿದ್ದೇವೆ. ಆದರೆ ಈ ಸರ್ಕಾರದ ಆಳ್ವಿಕೆಯ ಕೆಲವೇ ತಿಂಗಳುಗಳಲ್ಲಿ, ಅವರ ಕಣ್ಗಾವಲಿನಲ್ಲಿ ಒಂದು ಪವಿತ್ರ ದೇವಾಲಯವನ್ನು ಕೆಡವಲಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಕಾಶಿನಯನ ಕ್ಷೇತ್ರವನ್ನು ಇತ್ತೀಚೆಗೆ ನೆಲಸಮ ಮಾಡಲಾಯಿತು ಎಂದು ವರದಿಯಾಗಿದೆ.
2023ರ ಆಗಸ್ಟ್ 7ರಂದು ಅರಣ್ಯ ವ್ಯಾಪ್ತಿಯಲ್ಲಿ ಕಾಶಿನಯನ ಕ್ಷೇತ್ರದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಆದೇಶಿಸಿದರೂ ವೈಎಸ್‌ಆರ್‌ಸಿಪಿ ಸರ್ಕಾರ ಮಧ್ಯಪ್ರವೇಶಿಸಿ 12.98 ಹೆಕ್ಟೇರ್ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ವಿನಾಯಿತಿ ಕೋರಿತ್ತು ಎಂದು ಜಗನ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಆದೇಶದ ಮೇರೆಗೆ ದೇವಾಲಯವನ್ನು ಕೆಡವಲಾಗಿದೆ. ಇದು ಹಿಂದೂ ಧರ್ಮದ ಮೇಲಿನ ಅನಾಗರಿಕ ದಾಳಿ ಎಂದು ಜಗನ್ ಟೀಕಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ತಿರುಮಲ ಲಡ್ಡು ವಿವಾದ ಮತ್ತು ಕಾಲ್ತುಳಿತವು ದೇವಾಲಯಗಳ ಪಾವಿತ್ರ್ಯವನ್ನು ಕಾಪಾಡುವಲ್ಲಿ ವೈಫಲ್ಯ ಪ್ರದರ್ಶಿಸಿರುವುದನ್ನು ಉಲ್ಲೇಖಿಸಿದ ಜಗನ್ ಬೂಟಾಟಿಕೆ ಸರ್ಕಾರ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.