ADVERTISEMENT

ಜಹಾಂಗೀರ್‌ಪುರಿ ಗಲಭೆಯಲ್ಲಿ ಪೊಲೀಸ್‌ ಅಧಿಕಾರಿಗಳ ಪಾತ್ರ: ತನಿಖೆಗೆ ಕೋರ್ಟ್‌ ಸೂಚನೆ

ತನಿಖೆ ನಡೆಸುವಂತೆ ಪೊಲೀಸ್‌ ಆಯುಕ್ತರಿಗೆ ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಮೇ 2022, 15:40 IST
Last Updated 8 ಮೇ 2022, 15:40 IST
ಜಹಾಂಗೀರ್‌ಪುರಿಯಲ್ಲಿ ನಡೆದ ನೆಲಸಮ ಕಾರ್ಯಾಚರಣೆ
ಜಹಾಂಗೀರ್‌ಪುರಿಯಲ್ಲಿ ನಡೆದ ನೆಲಸಮ ಕಾರ್ಯಾಚರಣೆ   

ನವದೆಹಲಿ: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿಯ ದಿನವಾದ ಏಪ್ರಿಲ್‌ 16ರಂದು ನಡೆದ ಕೋಮು ಗಲಭೆಯ ಪಿತೂರಿಯಲ್ಲಿ, ಅಕ್ರಮ ಮೆರವಣಿಗೆ ತಡೆಯಲು ವಿಫಲರಾದ ಪೊಲೀಸ್‌ ಅಧಿಕಾರಿಗಳ ಪಾತ್ರ ಇದೆಯೇ ಎಂದು ತನಿಖೆ ನಡೆಸುವಂತೆ ದೆಹಲಿ ಪೊಲೀಸ್‌ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿದೆ.

ಇದು (ಮೆರವಣಿಗೆ ತಡೆ) ಪೊಲೀಸರ ಸಂಪೂರ್ಣ ವೈಫಲ್ಯ. ಇದನ್ನು ಬದಿಗೆ ತಳ್ಳಲು ಸಾಧ್ಯವೇ ಇಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಗಗನ್‌ದೀಪ್‌ ಸಿಂಗ್‌ ಹೇಳಿದ್ದಾರೆ.

ಮೆರವಣಿಗೆ ಸಂದರ್ಭದ ಘಟನಾವಳಿ, ಅನಪೇಕ್ಷಿತ ಘಟನೆ ತಡೆ ಮತ್ತು ಕಾನೂನು–ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಸ್ಥಳೀಯಾಡಳಿತದ ಪಾತ್ರ, ಪಿತೂರಿಯಲ್ಲಿ ಭಾಗಿಯಾದವರು ಯಾರು ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

ADVERTISEMENT

ಗಲಭೆಗೆ ಕಾರಣವಾದ ಮೆರವಣಿಗೆಗೆ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ. ಆ ಮೆರವಣಿಗೆಯು ಅಕ್ರಮವಾಗಿತ್ತು ಎಂದು ಸರ್ಕಾರ ಈಗಾಗಲೇ ಒಪ್ಪಿಕೊಂಡಿದೆ ಎಂದು ಕೋರ್ಟ್ ಹೇಳಿದೆ.

‘ಅನುಮತಿಯೇ ಪಡೆಯದ ಮೆರವಣಿಗೆಯನ್ನು ನಿಲ್ಲಿಸಲು ವಿಫಲರಾದ ಸ್ಥಳೀಯ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ, ಈ ವಿಚಾರವನ್ನು ಹಿರಿಯ ಅಧಿಕಾರಿಗಳು ಬದಿಗೆ ಸರಿಸಲು ಯತ್ನಿಸಿದಂತೆ ಕಾಣಿಸುತ್ತಿದೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ತಪ್ಪಿತಸ್ಥರು ಯಾರು ಎಂಬುದನ್ನು ಗುರುತಿಸಿ, ಹೊಣೆ ಹೊರಿಸಬೇಕಿದೆ. ಹಾಗಾದರೆ, ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸುವುದನ್ನು ತಡೆಯಬಹುದು. ಹಾಗೆಯೇ ಪೊಲೀಸರು ಅಸಡ್ಡೆ ತೋರುವುದನ್ನು ತಪ್ಪಿಸಬಹದು. ಪೊಲೀಸರು ಶಾಮೀಲಾಗಿದ್ದಾರೆಯೇ ಎಂಬುದನ್ನೂ ಪತ್ತೆ ಮಾಡಬೇಕಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಅಕ್ರಮ ಮೆರವಣಿಗೆಯನ್ನು ತಡೆಯುವ ಬದಲಿಗೆ, ಜಹಾಂಗೀರ್‌ಪುರಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ರಾಜೀವ್‌ ರಂಜನ್‌ ಮತ್ತು ಸಿಬ್ಬಂದಿ ಮೆರವಣಿಗೆಯ ಜತೆಗೆ ಸಾಗಿದ್ದರು ಎಂಬುದು ಎಫ್‌ಐಆರ್‌ನಿಂದಲೇ ಸ್ಪಷ್ಟವಾಗುತ್ತದೆ.ಮೆರವಣಿಗೆಯನ್ನು ನಿಲ್ಲಿಸಿ ಜನರನ್ನು ಚದುರಿಸುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸುವ ಬದಲಿಗೆ ಪೊಲೀಸರು ಮೆರವಣಿಗೆಯ ಉದ್ದಕ್ಕೂ ಜತೆಗೆ ಸಾಗಿದರು ಎಂದು ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಮೆರವಣಿಗೆಯ ಸಂದರ್ಭದಲ್ಲಿ ಕೋಮು ಗಲಭೆ ನಡೆದಿತ್ತು. ಬಳಿಕ, ಗಲಭೆಯ ಆರೋಪಿಗಳು ಅಕ್ರಮವಾಗಿ ನಿರ್ಮಿಸಿದ್ದಾರೆ ಎನ್ನಲಾದ ಕಟ್ಟಡಗಳನ್ನು ಉತ್ತರ ದೆಹಲಿ ಮಹಾನಗರ ಪಾಲಿಕೆಯು ನೆಲಸಮ ಮಾಡಲು ಆರಂಭಿಸಿತ್ತು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ನೀಡಿದ ಆದೇಶದ ಬಳಿಕ ಕಾರ್ಯಾಚರಣೆ ನಿಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.