ಜೈಪುರ: ರಾಜಸ್ಥಾನದ ಸಾಂಪ್ರದಾಯಿಕ ನೃತ್ಯ ಹಾಗೂ ಜಾನಪದ ಸಂಗೀತದ ಅಬ್ಬರ, ಚಳಿಯನ್ನು ಓಡಿಸಲು ಮಸಾಲಾ ಚಾಯ್ ಮತ್ತು ಬಿಯರ್ ಹತ್ತಿರ, ಹತ್ತಿರ. ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಗಂಭೀರವಾಗಿ ಚರ್ಚಿಸುವಷ್ಟು ಗೋಷ್ಠಿಗಳ ಹರವು ವಿಸ್ತಾರ.
ನಗರದ ಐತಿಹಾಸಿಕ ಡಿಗ್ಗಿ ಪ್ಯಾಲೆಸ್‌ನಲ್ಲಿ ಜೈಪುರ ಸಾಹಿತ್ಯ ಸಮ್ಮೇಳನದ 13ನೇ ಆವೃತ್ತಿ ಗುರುವಾರ ಗರಿಬಿಚ್ಚಿದ ಪರಿ ಇದು.
ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್, ‘ಮನ್ ಕಿ ಬಾತ್ (ಮನದ ಮಾತು) ಎಷ್ಟು ಮುಖ್ಯವೋ ಕಾಮ್ ಕಿ ಬಾತ್ (ಕೆಲಸದ ಮಾತು) ಅಷ್ಟೇ ಮುಖ್ಯ. ಸಮ್ಮೇಳನದ ಚರ್ಚೆಯಲ್ಲಿ ಎರಡಕ್ಕೂ ಅವಕಾಶ ಸಿಗಬೇಕು’ ಎನ್ನುತ್ತಾ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೇಲಿ ಮಾಡಿದರು.
ಅದೇ ಮಧ್ಯಾಹ್ನ ನಡೆದ ‘ಥಿಂಕಿಂಗ್ ಅಲೌಡ್’ ಗೋಷ್ಠಿಯಲ್ಲಿ ಗೀತರಚನೆಕಾರ ಪ್ರಸೂನ್ ಜೋಶಿ, ದೇಶಕ್ಕಾಗಿ ಸ್ವಂತದ್ದೆಲ್ಲವನ್ನೂ ತೊರೆದ ಫಕೀರ ಎಂದುಮೋದಿಯವರನ್ನು ಬಣ್ಣಿಸಿದರು.
ಊಟದ ವಿರಾಮಕ್ಕೂ ಮುನ್ನ ನಡೆದ ‘ಅಕ್ಬರ್ ಅಂಡ್ ದಾರಾ’ ಗೋಷ್ಠಿ ತುಂಬಾ ಕಾವಿನಿಂದ ಕೂಡಿತ್ತು.
ಚರ್ಚೆಗೆ ಮುನ್ನುಡಿ ಬರೆದ ಪತ್ರಕರ್ತ ಮಣಿಮುಗ್ಧ ಶರ್ಮಾ, ‘ಪ್ರಗತಿಪರ ಧೋರಣೆಗಳಿಂದ ಜನರ ಕಲ್ಯಾಣಕ್ಕೆ ಕಾರಣನಾಗಿದ್ದ ಮೊಘಲ್ ದೊರೆ ಅಕ್ಬರ್‌ನ ಹೆಸರಿಗೆ ಮಸಿ ಬಳಿಯುವ ಯತ್ನಗಳು 2014ರಿಂದಲೂ ನಡೆಯುತ್ತಿವೆ. ನಾನು ‘ಅಲ್ಲಾಹು ಅಕ್ಬರ್’ ಕೃತಿ ಬರೆಯಲು ಇಂತಹ ಅನಪೇಕ್ಷಿತ ಯತ್ನಗಳೇ ಪ್ರೇರಣೆ‘ ಎಂದು ಹೇಳಿದರು.
‘ಸ್ವಾತಂತ್ರ್ಯಪೂರ್ವದಲ್ಲಿ ಆಳಿಹೋದ ರಾಜರನ್ನು ಹಿಂದೂ, ಮುಸ್ಲಿಂ ಎನ್ನುವ ದೃಷ್ಟಿಕೋನದಿಂದ ನೋಡುವ ಪರಿಪಾಟವೇ ತಪ್ಪು. ಅವರೆಲ್ಲ ಭಾರತೀಯ ರಾಜರಾಗಿದ್ದರು ಅಷ್ಟೆ’ ಎಂದು ಶರ್ಮಾ ಹೇಳಿದರು.
‘ಕರ್ನಾಟಕದಲ್ಲೂ ಸರ್ಕಾರ ಬದಲಾದೊಡನೆ ಟಿಪ್ಪು ಸುಲ್ತಾನನ ಕುರಿತು ಧೋರಣೆ ಬದಲಾಗಿದ್ದನ್ನು ಗಮನಿಸಿದ್ದೀರಲ್ಲವೇ? ಮುಸ್ಲಿಂ ದೊರೆಗಳನ್ನೇ ಗುರಿಯಾಗಿಸಿಕೊಂಡು ಅವಹೇಳನದ ರಾಜಕೀಯ ಹೆಚ್ಚುತ್ತಿದೆ’ ಎಂದು ಅವರು ವಿಶ್ಲೇಷಿಸಿದರು.
ಗಾಂಧೀಜಿಯ ಮರಿ ಮೊಮ್ಮಗಳೂ ಆಗಿರುವ ಇತಿಹಾಸತಜ್ಞೆ ಸುಪ್ರಿಯಾ ಗಾಂಧಿ, ‘ಐತಿಹಾಸಿಕ ವ್ಯಕ್ತಿಗಳನ್ನು ವೈಭವೀಕರಿಸುವ ಬದಲು, ವಿಮರ್ಶಾತ್ಮಕ ನೋಟದಿಂದ ಅವರನ್ನು ಅರಗಿಸಿಕೊಳ್ಳಬೇಕು’ ಎಂದು ಚರ್ಚೆಗೆ ಮತ್ತೊಂದು ಆಯಾಮ ನೀಡಿದರು.
ಸಿಎಎ ವಿರುದ್ಧ ಧ್ವನಿ ಎತ್ತಲು ನಂದಿತಾ ಸಲಹೆ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟವನ್ನು ಬೆಂಬಲಿಸಿರುವ ನಟಿ ನಂದಿತಾ ದಾಸ್, ಕಾಯ್ದೆಗೆ ತೀವ್ರ ಪ್ರತಿರೋಧ ತೋರುವಂತಹ ‘ಶಹೀನ್ ಬಾಗ್’ ಸ್ವರೂಪದ ಪ್ರದೇಶಗಳು ದೇಶದ ಎಲ್ಲ ಕಡೆಗಳಲ್ಲಿ ಸೃಷ್ಟಿಯಾಗಲಿವೆ ಎಂದು ಭವಿಷ್ಯ ನುಡಿದರು.
ಸಮ್ಮೇಳನದ ‘ಮಂಟೊ ಮತ್ತು ನಾನು’ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನಾಲ್ಕು ತಲೆಮಾರುಗಳಿಂದಲೂ ಇಲ್ಲಿ ನೆಲೆಸಿರುವ ಜನರಿಗೆ ತಾವು ಭಾರತೀಯರು ಎಂಬುದನ್ನು ನಿರೂಪಿಸುವಂತೆ ಸರ್ಕಾರ ಕೇಳುತ್ತಿದೆ. ಈ ಧೋರಣೆ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು’ ಎಂದು ಹುರಿದುಂಬಿಸಿದರು.
‘ಆರ್ಥಿಕ ಹಿಂಜರಿತ, ನಿರುದ್ಯೋಗ ಹೆಚ್ಚಳ ಹಾಗೂ ಧರ್ಮದ ಆಧಾರದ ಮೇಲೆ ಜನರನ್ನು ಒಡೆದಾಳುವ ನೀತಿಯಿಂದಾಗಿ ಭಾರತ ಈಗ ಜಗತ್ತಿನ ಎಲ್ಲ ಕಡೆಗಳಲ್ಲಿ ಸುದ್ದಿಯಲ್ಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ನಮ್ಮ ಸಂವಿಧಾನ ಎಲ್ಲರಿಗೂ ಸಮಾನತೆ ಕಲ್ಪಿಸಿದೆ. ಧರ್ಮ, ಲಿಂಗ ಆಧಾರದ ಪ್ರತ್ಯೇಕತೆಯನ್ನು ನಾವು ಬಯಸುವುದಿಲ್ಲ’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.