ADVERTISEMENT

ಇಂದಿನಿಂದ ಜೈಪುರ ಸಾಹಿತ್ಯೋತ್ಸವ

ಜಗತ್ತಿನ ವಿವಿಧ ದೇಶಗಳ ಶ್ರೇಷ್ಠ ಸಾಹಿತಿಗಳು, ಚಿಂತಕರು ಭಾಗಿ

ಪದ್ಮನಾಭ ಭಟ್ಟ‌
Published 23 ಜನವರಿ 2019, 20:15 IST
Last Updated 23 ಜನವರಿ 2019, 20:15 IST
Jaipur Lit festival logo
Jaipur Lit festival logo   

ಜೈಪುರ: ಜಗತ್ತಿನ ದೊಡ್ಡ ಸಾಹಿತ್ಯೋತ್ಸವಗಳಲ್ಲಿ ಒಂದಾದ ‘ಜೈಪುರ ಸಾಹಿತ್ಯೋತ್ಸ’ವ ಇಲ್ಲಿನ ಡಿಗ್ಗಿ ಪ್ಯಾಲೇಸ್‌ನಲ್ಲಿ ಗುರುವಾರ ಆರಂಭವಾಗಲಿದೆ. ಇದು ಹನ್ನೆರಡನೇ ಆವೃತ್ತಿ. ಜ. 28ರಂದು ಸಮಾರೋಪಗೊಳ್ಳಲಿರುವ ಈ ಸಾಹಿತ್ಯೋತ್ಸವದಲ್ಲಿ ಜಗತ್ತಿನ ವಿವಿಧ ದೇಶಗಳ ಶ್ರೇಷ್ಠ ಸಾಹಿತಿಗಳು, ಚಿಂತಕರು, ಮಾನವಶಾಸ್ತ್ರಜ್ಞರು, ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.

‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವುದು ಮತ್ತು ಆರೋಗ್ಯಪೂರ್ಣ ಸಂವಾದಕ್ಕೆ ಪ್ರಜಾಸತ್ತಾತ್ಮಕ ಮತ್ತು ತಟಸ್ಥ ವೇದಿಕೆಯನ್ನು ಒದಗಿಸಿಕೊಡುವುದು ಈ ಸಾಹಿತ್ಯೋತ್ಸವದ ಮುಖ್ಯ ಉದ್ದೇಶ’ ಎಂದು ಸಂಘಟನಕಾರರು ಹೇಳಿಕೊಂಡಿದ್ದಾರೆ. ಸಾಹಿತ್ಯದ ಜತೆಗೆ ಯುದ್ಧ, ಬೇಹುಗಾರಿಕೆ, ರಾಜಕೀಯ, ಗಡಿ ಸಮಸ್ಯೆ, ಸಿನಿಮಾ, ಇತಿಹಾಸ, ಕಲೆ ಸೇರಿದಂತೆ ಹಲವು ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ.

‘ಮೀ ಟೂ’ ಅಭಿಯಾನದ ಕುರಿತೂ ಗೋಷ್ಠಿಆಯೋಜಿಸಲಾಗಿದ್ದು, ಕೇಂಬ್ರಿಜ್‌ ವಿಶ್ವವಿದ್ಯಾಲಯದ ಪ್ರಾಧ್ಯಾ ಪಕಿ ಮೇರಿ ಬಿಯರ್ಡ್‌ ಭಾಗವಹಿಸಲಿದ್ದಾರೆ.

ADVERTISEMENT

ಮ್ಯಾನ್‌ ಬೂಕರ್ ಪ್ರಶಸ್ತಿ ಪುರಸ್ಕೃತ ನೈಜೀರಿಯಾ ಕಾದಂಬರಿಕಾರ ಬೆನ್ ಒಕ್ರಿ, ಅಮೆರಿಕದ ಕ್ಲೋಸನ್ ವೈಟ್‌ಹೆಡ್‌, ಕೆನಡಾದ ಯಾನ್ ಮಾರ್ಟಲ್‌ ಸೇರಿದಂತೆ ಜಗತ್ತಿನ ವಿವಿಧ ಭಾಗದ ಜನಪ್ರಿಯ ಸಾಹಿತಿಗಳು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ. ಕನ್ನಡದ ಜನಪ್ರಿಯ ಕಥೆಗಾರ ಜಯಂತ ಕಾಯ್ಕಿಣಿ ಸಣ್ಣಕಥೆಗಳ ಕುರಿತ ಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಜೈಪುರ ಬುಕ್‌ ಮಾರ್ಕ್‌: ಸಾಹಿತ್ಯ ಉತ್ಸವದ ಜತೆಗೆ ಕಳೆದ ಆರು ವರ್ಷಗಳಿಂದ ‘ಜೈಪುರ ಬುಕ್‌ ಮಾರ್ಕ್‌’ ಅನ್ನು ಆಯೋಜಿಸಲಾಗುತ್ತಿದೆ. ಪ್ರಕಾಶಕರು, ಸಾಹಿತ್ಯ ಪ್ರತಿನಿಧಿಗಳು, ಭಾಷಾಂತರಕಾರರು, ಸಾಹಿತಿಗಳ ನಡುವೆ ಸಂಪರ್ಕ ಏರ್ಪಡಿಸುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ.

ಯುವ ಸಾಹಿತಿಗಳಿಗೆ ಕಾರ್ಯಾಗಾರಗಳನ್ನೂ ಏರ್ಪಡಿಸಲಾಗುತ್ತಿದ್ದು, ಕಥೆ, ಕವನ, ಸಿನಿಮಾ ಸ್ಕ್ರಿಪ್ಟ್‌, ಕಾದಂಬರಿ, ಸೃಜನೇತರ ಬರವಣಿಗೆ ಕುರಿತು ತಜ್ಞರಿಂದ ತರಬೇತಿ ನೀಡ ಲಾಗುತ್ತದೆ. ಜತೆಗೆ ಆಯ್ಕೆಯಾದ ಹತ್ತು ಬರಹಗಾರರಿಗೆ ಅಂತರರಾಷ್ಟ್ರೀಯ ಪ್ರಕಾಶಕರ ಜತೆ ಸಂಪರ್ಕವನ್ನೂ ಕಲ್ಪಿಸಲಾಗುತ್ತದೆ. ಮೂರು ಪ್ರತ್ಯೇಕ ವಿಭಾಗ ಗಳಲ್ಲಿ ಪ್ರಶಸ್ತಿಯನ್ನೂ ನೀಡಲಾಗುತ್ತದೆ.

ಸಂಗೀತ ಜಾತ್ರೆ: ಜ.24ರಿಂದ 27ರವರೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಎಲ್. ಸುಬ್ರ ಮಣಿಯನ್, ಜಸ್ವೀರ್ ಜಸ್ಸಿ, ಕುಟ್ಲೆ ಖಾನ್, ನೂರಾನ್ ಸಹೋದರಿಯರು, ಬರ್ನಾಲಿ ಚಟ್ಟೋಪಾಧ್ಯಾಯ, ದೀಪಾ ರಸಿಯಾ, ವಿದ್ಯಾ ಶಾ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.