ADVERTISEMENT

ಜೈಪುರ ಸಾಹಿತ್ಯ ಉತ್ಸವ: ಗಿಗ್ ಕಾರ್ಮಿಕರ ಸಮಸ್ಯೆಗಳ ಪ್ರತಿಧ್ವನಿ

ನಾಲ್ಕನೇ ದಿನ ಹಲವು ಗಂಭೀರ ಚರ್ಚೆ

ಬಿ.ವಿ. ಶ್ರೀನಾಥ್
Published 18 ಜನವರಿ 2026, 23:30 IST
Last Updated 18 ಜನವರಿ 2026, 23:30 IST
ಜೈಪುರ ಸಾಹಿತ್ಯ ಉತ್ಸವದಲ್ಲಿ ಗಿಗ್ ಆರ್ಥಿಕತೆ ಕುರಿತ ಗೋಷ್ಠಿಯಲ್ಲಿ ಲೇಖಕಿಯರಾದ ವಂದನಾ ವಾಸುದೇವನ್, ಕೇತಕಿ ಕಾರ್ಣಿಕ್ ಮತ್ತು ಅರ್ಥಶಾಸ್ತ್ರಜ್ಞ ರಾಕೇಶ್ ಮೋಹನ್ ಭಾಗವಹಿಸಿದ್ದರು
ಜೈಪುರ ಸಾಹಿತ್ಯ ಉತ್ಸವದಲ್ಲಿ ಗಿಗ್ ಆರ್ಥಿಕತೆ ಕುರಿತ ಗೋಷ್ಠಿಯಲ್ಲಿ ಲೇಖಕಿಯರಾದ ವಂದನಾ ವಾಸುದೇವನ್, ಕೇತಕಿ ಕಾರ್ಣಿಕ್ ಮತ್ತು ಅರ್ಥಶಾಸ್ತ್ರಜ್ಞ ರಾಕೇಶ್ ಮೋಹನ್ ಭಾಗವಹಿಸಿದ್ದರು   

ಜೈಪುರ: ಜೈಪುರ ಸಾಹಿತ್ಯ ಉತ್ಸವದಲ್ಲಿ ನಾಲ್ಕನೇ ದಿನವಾದ ಭಾನುವಾರ ಗಿಗ್ ಕಾರ್ಮಿಕರು ಮತ್ತು ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಬಗ್ಗೆ ಗಂಭೀರ ಚರ್ಚೆಗಳು ನಡೆದವು.

ಲೇಖಕಿಯರಾದ ವಂದನಾ ವಾಸುದೇವನ್ ಮತ್ತು ಕೇತಕಿ ಕಾರ್ಣಿಕ್ ಮತ್ತು ಅರ್ಥಶಾಸ್ತ್ರಜ್ಞ ರಾಕೇಶ್ ಮೋಹನ್ ಅವರು ಗಿಗ್ ಕಾರ್ಮಿಕರು ಮತ್ತು ಗಿಗ್ ಆರ್ಥಿಕತೆಯ ಬಗ್ಗೆ ಒಳನೋಟ ಬೀರಿದರು.

‘ಭಾರತದಲ್ಲಿ ಅನೌಪಚಾರಿಕ ಆರ್ಥಿಕತೆ ಪ್ರಧಾನ ಪಾತ್ರ ವಹಿಸುತ್ತಿದ್ದು, ಗಿಗ್ ಕಾರ್ಮಿಕರೂ ಇದೇ ವರ್ಗಕ್ಕೆ ಸೇರುತ್ತಾರೆ. ಆದರೆ, ಈ ವಲಯದ ಇತರರಿಗೆ ಇರುವ ಸ್ವಾತಂತ್ರ್ಯ ಗಿಗ್ ಕಾರ್ಮಿಕರಿಗೆ ಇಲ್ಲ. ವರ್ಷವೊಂದಕ್ಕೆ ಗಿಗ್ ಕಾರ್ಮಿಕರಿಗೆ ಸರಾಸರಿ 38 ದಿನಗಳ ಕೆಲಸ ಮಾತ್ರ ಸಿಗುತ್ತಿದೆ. ಈ ವಲಯದಲ್ಲಿ ಇರುವವರ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ’ ಎಂದು ವಂದನಾ ವಾಸುದೇವನ್ ಹೇಳಿದರು.

ADVERTISEMENT

‘ನಿರಂತರವಾಗಿ ಡಿಜಿಟಲ್ ನಿಗಾದಲ್ಲಿ ಕೆಲಸ ಮಾಡುವ ಕಾರ್ಮಿಕರು ಖಿನ್ನತೆ, ಒತ್ತಡಗಳಿಗೆ ಗುರಿಯಾಗುತ್ತಿದ್ದಾರೆ’ ಎಂದು ಅವರು ವಿವರಿಸಿದರು.

‘ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ನಕಾರಾತ್ಮಕ ಧೋರಣೆ ತಳೆಯುವ ಅಗತ್ಯವಿಲ್ಲ. ಇದರಿಂದ ಅನೇಕ ರೀತಿಯಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿವೆ’ ಎನ್ನುವುದು ರಾಕೇಶ್ ಮೋಹನ್ ಅವರ ಅಭಿಪ್ರಾಯ.

ಗಿಗ್ ಕಾರ್ಮಿಕರ ಕೆಲಸ ಅಲ್ಪ ಅವಧಿಯದ್ದಾದರೂ ಹಲವು ರೀತಿಯ ಸಮಸ್ಯೆಗಳನ್ನು, ಅಪಾಯಗಳನ್ನು ಎದುರಿಸಬೇಕು. ಕನಿಷ್ಠ ಇವರಿಗೆ ಸಾಮಾಜಿಕ ಭದ್ರತೆ, ಸುರಕ್ಷತೆ, ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕು ಎನ್ನುವ ಅಭಿಪ್ರಾಯ ಸಂವಾದದಲ್ಲಿ ಮೂಡಿತು.

ಆರೋಗ್ಯ ಕ್ಷೇತ್ರದಲ್ಲಿ ಉತ್ತರದಾಯಿತ್ವ ಸಮಸ್ಯೆ: ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತ ಗೋಷ್ಠಿಯಲ್ಲಿ ದಿ ಲ್ಯಾನ್ಸೆಟ್ ಪತ್ರಿಕೆಯ ಮುಖ್ಯ ಸಂಪಾದಕ ರಿಚರ್ಡ್ ಹಾಟರ್ನ್, ವೈದ್ಯ ವಿಕ್ರಮ್ ಪಟೇಲ್, ಪ್ರಾಧ್ಯಾಪಕ ತರುಣ್ ಖನ್ನಾ ಮತ್ತು ಮಹಿಳಾ ಹಕ್ಕು ಹೋರಾಟಗಾರ್ತಿ ಪೂನಂ‌ ಮುತ್ರೇಜಾ ಭಾಗವಹಿಸಿದ್ದರು.

‘ಭಾರತದ ಸಾರ್ವಜನಿಕ‌ ಆರೋಗ್ಯ ಕ್ಷೇತ್ರದಲ್ಲಿ ಉತ್ತರದಾಯಿತ್ವದ ಸಮಸ್ಯೆ ಮತ್ತು ಗುಣಮಟ್ಟದ ಕೊರತೆ ಇದೆ. ಖಾಸಗಿ ಆಸ್ಪತ್ರೆಗಳ ವಲಯಕ್ಕೆ ಯಾವುದೇ ನಿಯಂತ್ರಣ ಇಲ್ಲವಾಗಿದೆ’ ಎಂದು ವಿಕ್ರಮ್ ಪಟೇಲ್ ವ್ಯಾಖ್ಯಾನಿಸಿದರು.

‘ಲ್ಯಾನ್ಸೆಟ್ ಪತ್ರಿಕೆಯು ಭಾರತದಲ್ಲಿ ಜನರ ಆರೋಗ್ಯ ಕ್ಷೇತ್ರವನ್ನು ಪುನರ್ ರೂಪಿಸುವ ಬಗ್ಗೆ ಹಲವು ವರ್ಷಗಳ ಹಿಂದೆಯೇ ವರದಿ ಪ್ರಕಟಿಸಿದೆ. ಆದರೆ, ಈ ದಿಸೆಯಲ್ಲಿ ಯಾವುದೇ ಕೆಲಸ ಆಗಲಿಲ್ಲ’ ಎಂದು ಪೂನಂ ಮುತ್ರೇಜಾ ಹೇಳಿದರು.

‘ಸಾರ್ವಜನಿಕ‌ ಆರೋಗ್ಯ ಸೇವೆಗಳ ವಲಯದಲ್ಲಿ ಜನರ ಭಾಗೀದಾರಿಕೆ ಅಗತ್ಯವಾಗಿದೆ. ಇದನ್ನು ಸಾಧ್ಯವಾಗಿಸಲು ಭಾರತೀಯರು ಹೋರಾಡಬೇಕಿದೆ’ ಎಂದು ರಿಚರ್ಡ್ ಹಾಟರ್ನ್ ನುಡಿದರು.

ಭಾರತದ ಕಳಪೆ ಸಾರ್ವಜನಿಕ ಆರೋಗ್ಯ ಸೇವೆಗಳ ವ್ಯವಸ್ಥೆಯಲ್ಲಿ ಮಹಿಳೆ ಅತಿ ಹೆಚ್ಚು ಸಂತ್ರಸ್ತಳು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಜೈಪುರ ಸಾಹಿತ್ಯ ಉತ್ಸವದಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರೊಂದಿಗೆ ಪತ್ರಕರ್ತ ವೀರ್ ಸಾಂಘ್ವಿ ಸಂವಾದ ನಡೆಸಿದರು

ಭಾರಿ ಜನಸಂದಣಿ

ಭಾನುವಾರದ ಉತ್ಸವದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಸಂವಾದ ಗೋಷ್ಠಿ ನಡೆಯಿತು. ಅದನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಬಾರಿಯ ಉತ್ಸವದಲ್ಲಿ ಅತಿ ಹೆಚ್ಚು ಜನ ಸೇರಿದ್ದ ಗೋಷ್ಠಿ ಅದಾಗಿತ್ತು. ಜನ ನಿಲ್ಲಲೂ ಸ್ಥಳ ಇರಲಿಲ್ಲ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದೂ ಕಷ್ಟವಾಗಿತ್ತು. ಆದರೆ ನ್ಯಾ.ಚಂದ್ರಚೂಡ್ ಮಾತು ಆರಂಭಿಸಿದ ನಂತರ ಎಲ್ಲರೂ ನಿಶ್ಯಬ್ದದಿಂದ  ಕೇಳಿಸಿಕೊಂಡರು. ಅವರ ಮಾತು ಮೆಚ್ಚಿ ಆಗಾಗ್ಗೆ ಚಪ್ಪಾಳೆ ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.