ಜೈಪುರ : ರಾಜಾಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯ ಮನೆಯೊಂದರ ಮೇಲ್ಛಾವಣಿಯ ನೀರಿನ ಟ್ಯಾಂಕ್‌ನೊಳಗೆ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಹಂಸ್ರಾಮ್ (ಸೂರಜ್) ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ನಿವಾಸಿ. ಮೃತನು ಕಿಶನ್‌ಗಢಬಾಸ್‌ನ ಆದರ್ಶ ಕಾಲೋನಿಯಲ್ಲಿ ಪತ್ನಿ ಮೂವರು ಮಕ್ಕಳೊಂದಿಗೆ ವಾಸವಾಗಿದ್ದ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಸಿಂಗ್ ನಿರ್ವಾನ್ ತಿಳಿಸಿದ್ದಾರೆ.
ನೆರೆಹೊರೆಯವರು ದುರ್ವಾಸನೆಯ ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಹಂಸ್ರಾಮ್ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿರುವ ಸಾಧ್ಯತೆಗಳಿದ್ದು, ವೇಗವಾಗಿ ಕೊಳೆಯುವಂತೆ ಮಾಡಲು ಉಪ್ಪನ್ನು ಸುರಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಒಂದೂವರೆ ತಿಂಗಳಿನ ಹಿಂದೆ ಹಂಸ್ರಾಮ್ ಕುಟುಂಬವು ಮನೆಯ ಬಾಡಿಗೆಗೆ ಬಂದಿದ್ದರು. ಇಟ್ಟಿಗೆಯ ಗೂಡಿನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಹಂಸ್ರಾಮ್ ಆಗಾಗ ಜಿತೇಂದ್ರ ಜೊತೆ ಮದ್ಯ ಸೇವಿಸುತ್ತಿದ್ದ. ಶನಿವಾರ ಸಂಜೆಯಿಂದ ಮನೆಯ ಮಾಲೀಕನ ಮಗ ಜಿತೇಂದ್ರ ಹಾಗೂ ಹಂಸ್ರಾಮ್‌ನ ಕುಟುಂಬವು ಕಾಣೆಯಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಾಪತ್ತೆಯಾದ ಜಿತೇಂದ್ರ ಹಾಗೂ ಹಂಸ್ರಾಮ್ ಕುಟುಂಬಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.