
ನವದೆಹಲಿ: ‘ವಂದೇ ಮಾತರಂನ 150ನೇ ವರ್ಷಾಚರಣೆ ಚರ್ಚೆಯ ಉದ್ದೇಶ ಪೂರ್ವಕವಾಗಿ ಜವಾಹರಲಾಲ್ ನೆಹರೂ ಅವರನ್ನು ಟೀಕಿಸುವುದಾಗಿತ್ತು. ಅಲ್ಲದೆ, ಅದು ಅಂತಿಮವಾಗಿ ರವಿಂದ್ರನಾಥ ಟ್ಯಾಗೋರ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನೂ ಅವಮಾನಿಸಿತು’ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕ ಜೈರಾಮ್ ರಮೇಶ್ ಬುಧವಾರ ಆರೋಪಿಸಿದರು.
ಮೇಲ್ಮನೆಯಲ್ಲಿ ವಂದೇ ಮಾತರಂ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಆಡಳಿತಾರೂಢ ಬಿಜೆಪಿಯು ಇತಿಹಾಸವನ್ನು ವಿರೂಪಗೊಳಿಸುತ್ತಿದೆ’ ಎಂದು ದೂರಿದರು.
‘1937ರ ಅಕ್ಟೋಬರ್ 28ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಂದೇ ಮಾತರಂ ಕುರಿತು ನಿರ್ಣಯ ಅಂಗೀಕರಿಸಲಾಯಿತು. ಆಗ ಸಭೆಯಲ್ಲಿ ನಾಯಕರಾದ ಮಹಾತ್ಮ ಗಾಂಧಿ, ಸುಭಾಶ್ ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಮೌಲಾನಾ ಆಜಾದ್, ಆಚಾರ್ಯ ಕೃಪಲಾನಿ, ಜಿ.ಬಿ.ಪಂತ್ ಸೇರಿದಂತೆ ಹಲವರು ಹಾಜರಿದ್ದರು. ಹಾಗಾದರೆ ಅವರೆಲ್ಲರೂ ಮುಸ್ಲಿಮರನ್ನು ಓಲೈಸುತ್ತಿದ್ದರೇ’ ಎಂದು ಅವರು ಪ್ರಶ್ನಿಸಿದರು.
1927ರ ಅಕ್ಟೋಬರ್ 30ರಂದು ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳಲು ನಿರ್ಣಯ ಅಂಗೀಕರಿಸುವಂತೆ ಟ್ಯಾಗೋರ್ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸಲಹೆ ನೀಡಿದ್ದರು. ನಂತರ ಅದನ್ನು ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಳ್ಳಲಾಯಿತು ಎಂದು ಅವರು ವಿವರಿಸಿದರು.
ಹುಸೇನ್ ಕಿಡಿ: ಕಾಂಗ್ರೆಸ್ ಸಂಸದ ಸೈಯದ್ ನಾಸಿರ್ ಹುಸೇನ್ ಮಾತನಾಡಿ, ‘ಮಹಮ್ಮದ್ ಅಲಿ ಜಿನ್ನಾ ಅವರ ಸಮಾಧಿ ಬಳಿ ತಲೆಬಾಗಿದವರಿಂದ ನಾವು ರಾಷ್ಟ್ರೀಯತೆಯ ಪಾಠ ಕಲಿಯಬೇಕೇ’ ಎಂದು ಕಿಡಿಕಾರಿದರು.
‘ವಂದೇ ಮಾತರಂ ಗೀತೆಯು ದೇಶದ ಮೂಲೆ ಮೂಲೆಗಳಲ್ಲಿ ಹರಡಲು ಕಾಂಗ್ರೆಸ್ ಕೆಲಸ ಮಾಡಿದೆ ಎಂಬುದು ಐತಿಹಾಸಿಕ ಸತ್ಯ’ ಎಂದು ಅವರು ಪ್ರತಿಪಾದಿಸಿದರು.
2005ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಮತ್ತು ಜಿನ್ನಾ ಅವರ ಸಮಾಧಿ ಬಳಿ ತಲೆಬಾಗಿ ಗೌರವ ಸಲ್ಲಿಸಿದ್ದ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹುಸೇನ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.