ADVERTISEMENT

ತಾಕತ್ತಿದ್ದರೆ ನನ್ನನ್ನೂ ಬಂಧಿಸಿ: ಕೇಂದ್ರಕ್ಕೆ ರಾಹುಲ್‌ ಸವಾಲು

ಕೋವಿಡ್‌ ಲಸಿಕೆಗಳು ಎಲ್ಲಿ ನಾಪತ್ತೆಯಾದವು? ಸರ್ಕಾರಕ್ಕೆ ಕಾಂಗ್ರೆಸ್‌ ಮುಖಂಡರ ಪ್ರಶ್ನೆ

ಪಿಟಿಐ
Published 16 ಮೇ 2021, 13:36 IST
Last Updated 16 ಮೇ 2021, 13:36 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಕೋವಿಡ್‌ ಲಸಿಕೆ ರಫ್ತು ಕ್ರಮವನ್ನು ಪ್ರಶ್ನಿಸಿ ರಾಜಧಾನಿಯಲ್ಲಿ ಭಿತ್ತಿಪತ್ರ ಹಾಕಿದ್ದಕ್ಕಾಗಿ ಕನಿಷ್ಠ 25 ಜನರನ್ನು ಬಂಧಿಸಿದ ಪೊಲೀಸರ ಕ್ರಮದ ವಿರುದ್ಧ ಕಾಂಗ್ರೆಸ್‌ ಮುಖಂಡರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೋವಿಡ್ ಲಸಿಕೆಗಳನ್ನು ರಫ್ತು ಮಾಡಿದ ಕ್ರಮದ ವಿರುದ್ಧ ನಾವು ಕಠಿಣವಾಗಿ ಪ್ರಶ್ನಿಸುತ್ತೇವೆ. ಧೈರ್ಯವಿದ್ದರೆ ನನ್ನನ್ನೂ ಬಂಧಿಸಿ’ ಎಂದು ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಟ್ವೀಟ್‌ನಲ್ಲಿ ಸವಾಲುಹಾಕಿದ್ದಾರೆ.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ರಾಹುಲ್‌ ಅವರು ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್‌ ಚಿತ್ರದಲ್ಲಿಯೇ ವಿದೇಶಕ್ಕೆ ಏಕೆ ಲಸಿಕೆ ಕಳುಹಿಸಲಾಯಿತು ಎಂದು ಪ್ರಶ್ನಿಸುವ ಭಿತ್ತಿಪತ್ರ ಹಾಕಿಕೊಂಡಿದ್ದಾರೆ.

ADVERTISEMENT

ಜನರಿಗೆ ಲಸಿಕೆ, ಔಷಧ, ಆಮ್ಲಜನಕ ಸಿಗದಿದ್ದರೆ ಮೋದಿಗೆ ಇನ್ನೂ ಕಠಿಣವಾದ ಪ್ರಶ್ನೆಗಳು ಕೇಳುತ್ತಾರೆ ಎಂದು ವಿರೋಧಪಕ್ಷ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಲಸಿಕೆ ಕೊರತೆಯನ್ನು ಪ್ರಶ್ನಿಸಿ ಭಿತ್ತಿಪತ್ರ ಹಾಕಿದ್ದ ಪ್ರಕರಣ ಸಂಬಂಧ ರಾಜಧಾನಿಯಲ್ಲಿ ಪೊಲೀಸರು ಶನಿವಾರ ಹಲವರನ್ನು ಬಂಧಿಸಿದ್ದರು. ಅಲ್ಲದೆ, ಬಂಧಿತರ ವಿರುದ್ಧ ಪೊಲೀಸರು ಎಫ್‌ಐ‌ಆರ್‌ ಅನ್ನೂ ದಾಖಲಿಸಿದ್ದರು.

ಜೈರಾಂ ರಮೇಶ್ ಪ್ರಶ್ನೆ: ‘ಕೋವಿಡ್‌ ಲಸಿಕೆಗಳು ಎಲ್ಲಿ ನಾಪತ್ತೆಯಾದವು’ ಎಂದು ಪ್ರಧಾನಿಯನ್ನು ಪ್ರಶ್ನಿಸುವ ಭಿತ್ತಿಪತ್ರವನ್ನು ಕಾಂಗ್ರಸ್‌ನ ರಾಜ್ಯಸಭೆ ಸದಸ್ಯ, ಮುಖ್ಯ ಸಚೇತಕ ಜೈರಾಂ ರಮೇಶ್‌ ತಮ್ಮ ನಿವಾಸದ ಎದುರು ಹಾಕಿದ್ದಾರೆ.

‘ಮೋದಿಯವರೇ, ಉತ್ತರ ನೀಡಿ. ಲಸಿಕೆಯು ನಿಮ್ಮ ಹಾಗೇ ಹೇಗೆ ನಾಪತ್ತೆಯಾಯಿತು?’ ಎಂದು ಹಿಂದಿಯಲ್ಲಿ ಬರೆಯಲಾದ ಭಿತ್ತಿಪತ್ರವನ್ನು ಇಲ್ಲಿನ ಲೋಧಿ ರಸ್ತೆಯಲ್ಲಿರುವ ಜೈರಾಂ ರಮೇಶ್ ಅವರ ನಿವಾಸದ ಎದುರು ಹಾಕಲಾಗಿದೆ.

’25 ಜನರನ್ನು ಬಂಧಿಸಿದ ಪ್ರಕರಣದ ಹಿಂದೆಯೇ, ನಾನೂ ಇಂಥ ಭಿತ್ತಿಪತ್ರವನ್ನು ನನ್ನ ಮನೆ ಎದುರು ಹಾಕುತ್ತೇನೆ. ಧೈರ್ಯವಿದ್ದರೆ ಪೊಲೀಸರು ನನ್ನನ್ನು ಬಂಧಿಸಲಿ’ ಎಂದು ಸವಾಲು ಹಾಕಿದ್ದು, ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ ವಿರುದ್ಧ ಟೀಕಾತ್ಮಕ ಭಿತ್ತಿಪತ್ರ ಹಾಕುವುದು ಅಪರಾಧವೇ? ಈಗ ಭಾರತದಲ್ಲಿ ಮೋದಿ ದಂಡಸಂಹಿತೆ ಚಾಲ್ತಿಯಲ್ಲಿದೆಯೇ? ಅಥವಾ ಕೋವಿಡ್‌ ಪರಿಸ್ಥಿತಿಯ ನಡುವೆ ದೆಹಲಿ ಪೊಲೀಸರಿಗೆ ಬೇರೇ ಕೆಲಸವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

‘ಇಂಥ ಭಿತ್ತಿಪತ್ರವನ್ನು ನಾನು ಮನೆ ಎದುರು ಹಾಕಿದ್ದೇನೆ. ಬನ್ನಿ, ನನ್ನನ್ನು ಬಂಧಿಸಿ’ ಎಂದು ಮಾಡಿರುವ ಟ್ವೀಟ್‌ ಅನ್ನು ದೆಹಲಿ ಪೊಲೀಸರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಟ್ಯಾಗ್‌ ಮಾಡಿದ್ದಾರೆ.

‘ಮೋದಿಯವರೆ, ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳುಹಿಸಿದೀರಿ? ಎಂದು ಪ್ರಶ್ನಿಸಿದ್ದ ಭಿತ್ತಿಪತ್ರಗಳನ್ನು ಹಾಕಿದ್ದಕ್ಕಾಗಿ ದೆಹಲಿ ಪೊಲೀಸರು ಶನಿವಾರ 25 ಜನರನ್ನು ಬಂಧಿಸಿದ್ದರು. ದೆಹಲಿಯ ವಿವಿಧೆಡೆ ಇಂಥ ಭಿತ್ತಿಪತ್ರಗಳು ಕಾಣಿಸಿಕೊಂಡಿದ್ದವು.

ಇಂಥ ಭಿತ್ತಿಪತ್ರಗಳನ್ನು ಮುದ್ರಿಸಿ, ವಿವಿಧೆಡೆ ಅಂಟಿಸಲು ಉತ್ತೇಜನ ನೀಡುತ್ತಿರುವವರು ಯಾರು ಎಂಬುದರ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದರು.

‘ಸರ್ಕಾರ ಕೋವಿಡ್ ಸ್ಥಿತಿ ನಿರ್ವಹಿಸುತ್ತಿಲ್ಲ. ವರ್ಚಸ್ಸು ನಿರ್ವಹಣೆ ಮಾಡುತ್ತಿದೆ..'

ನನ್ನ ಲಸಿಕೆ ಎಲ್ಲಿ, ನನ್ನ ಆಮ್ಲಜನಕ ಎಲ್ಲಿ. ಇಂಥ ಪ್ರಶ್ನೆಗಳನ್ನು ನಾವು ಕೇಳುತ್ತೇವೆ. ಜನರಿಗೆ ಔಷಧ, ಲಸಿಕೆ ಸಿಗದಿದ್ದರೆ ಪ್ರಧಾನಿಗೆ ಇಂಥ ಪ್ರಶ್ನೆ ಕೇಳಲಾಗುತ್ತದೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖೇರಾ ಅವರು, ಜನರು ಕೋವಿಡ್‌ನಿಂದ ಸಾಯುತ್ತಿಲ್ಲ. ಪಿಡುಗು ನಿರ್ವಹಣೆಯ ಸರ್ಕಾರದ ಅವ್ಯವಸ್ಥೆಯಿಂದ ಸಾಯುತ್ತಿದ್ದಾರೆ. ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಟೀಕಿಸಿದರು.

‘ಕೇಂದ್ರೀಕೃತವಾಗಿ ನಿರ್ಧಾರ ಕೈಗೊಳ್ಳಲಾಗದು. ಜವಾಬ್ದಾರಿಯನ್ನು ವಿಕೇಂದ್ರೀಕರಣ ಮಾಡಿ. ಸರ್ಕಾರ ಕೇವಲ ವರ್ಚಸ್ಸಿನ ನಿರ್ವಹಣೆ ಮಾಡುತ್ತಿದೆ. ಇದು, ಸರ್ಕಾರದ ದುರದೃಷ್ಟ, ದೇಶದ ಹಣೆಬರಹವಾಗಿದೆ’ ಎಂದು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.