ADVERTISEMENT

ವೈಯಕ್ತಿಕ ಮಾಹಿತಿ ರಕ್ಷಣಾ ಮಸೂದೆ: ಕಾಂಗ್ರೆಸ್, ಟಿಎಂಸಿಯಿಂದ ತಕರಾರು

ಪಿಟಿಐ
Published 22 ನವೆಂಬರ್ 2021, 12:18 IST
Last Updated 22 ನವೆಂಬರ್ 2021, 12:18 IST
ಜೈರಾಂ ರಮೇಶ್
ಜೈರಾಂ ರಮೇಶ್   

ನವದೆಹಲಿ: ‘ವೈಯಕ್ತಿಕ ಮಾಹಿತಿ ರಕ್ಷಣಾ ಮಸೂದೆ 2019’ಕ್ಕೆ ಸಂಬಂಧಿಸಿದ ಸಂಸತ್ತಿನ ಜಂಟಿ ಸಮಿತಿ ಸೋಮವಾರ ತನ್ನ ವರದಿ ಅಂಗೀಕರಿಸಿತು. ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್ ಸದಸ್ಯರು ವರದಿಗೆ ಭಿನ್ನಾಭಿಪ್ರಾಯ ದಾಖಲಿಸಿದ್ದಾರೆ.

‘ಸಮಿತಿಯ ಅಧ್ಯಕ್ಷರಾಗಿದ್ದ ಮೀನಾಕ್ಷಿ ಲೇಖಿ ಅವರು ಸಚಿವೆಯಾದ ಬಳಿಕ ಹೊಸ ಅಧ್ಯಕ್ಷರ ನೇಮಕವಾಗಿತ್ತು. ಹೀಗಾಗಿ, ವರದಿಯ ಅಂಗೀಕಾರವೂ ವಿಳಂಬವಾಗಿತ್ತು. ಸಂಸತ್ತಿನಲ್ಲಿ ಮಸೂದೆ ಮಂಡನೆಗೆ ಪೂರ್ವಭಾವಿಯಾಗಿ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಯ ಪರಿಶೀಲನೆಗಾಗಿ ಒಪ್ಪಿಸಲಾಗಿತ್ತು.

‘ಪಿ.ಸಿ.ಚೌಧರಿ ಅವರ ನೇತೃತ್ವದ ಸಮಿತಿ ನನ್ನ ಸಲಹೆಯನ್ನು ಒಪ್ಪಲಿಲ್ಲ, ಮನದಟ್ಟು ಮಾಡಿಕೊಡಲು ಆಗಲಿಲ್ಲ. ಹೀಗಾಗಿ, ಭಿನ್ನಮತ ಸಲ್ಲಿಸಿದ್ದೇನೆ. ಈಗ ಮಸೂದೆ ಸಂಸತ್ತಿನಲ್ಲಿ ಚರ್ಚೆಗೆ ಬರಬೇಕು’ ಎಂದು ಕಾಂಗ್ರೆಸ್‌ನ ಜೈರಾಂ ರಮೇಶ್‌ ಹೇಳಿದರು.

ADVERTISEMENT

‘ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಅವರು, ಮಸೂದೆಯಲ್ಲಿ ನಿರ್ಣಾಯಕ ಅಂಶವಾಗಿರುವ ಸೆಕ್ಷನ್‌ 35ಕ್ಕೆ ತಿದ್ದುಪಡಿ ತರಲು ನಾನು ಸಲಹೆ ಮಾಡಿದೆ. ಕಾಯ್ದೆಯ ವ್ಯಾಪ್ತಿಯಿಂದ ಯಾವುದೇ ಸರ್ಕಾರಿ ಸಂಸ್ಥೆಯನ್ನು ಕೈಬಿಡುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಉಲ್ಲೇಖಿತ ಸೆಕ್ಷನ್‌ ನೀಡಲಿದೆ’ ಎಂದೂ ವಿವರಿಸಿದರು.

‘ಹೀಗೇ ವಿನಾಯಿತಿ ನೀಡುವ ಮುನ್ನ ಕೇಂದ್ರ ಸರ್ಕಾರವು ಸಂಸತ್ತಿನ ಅನುಮೋದನೆ ಪಡೆಯಬೇಕು. ಆಗಲೂ ಸುರಕ್ಷತಾ ಕ್ರಮಗಳಿಗೆ ಅನ್ವಯಿಸುವಂತೆ ಕಾಯ್ದೆಯ ನಿಯಮಗಳಿಗೆ ಕೇಂದ್ರ ಬದ್ಧವಾಗಿರಬೇಕು ಎಂಬುದು ನನ್ನ ಸಲಹೆಯಾಗಿತ್ತು’ ಎಂದು ಹೇಳಿದರು.

ಕಾಂಗ್ರೆಸ್‌ ಸದಸ್ಯರಾದ ಮನೀಶ್‌ ತಿವಾರಿ, ಗೌರವ್ ಗೊಗೋಯ್, ವಿವೇಕ್ ತಂಖಾ, ಬಿಜೆಡಿಯ ಅಮರ್ ಪಟ್ನಾಯಕ್‌ ಅವರೂ ತಮ್ಮ ಭಿನ್ನಾಭಿಪ್ರಾಯಗಳನ್ನು ದಾಖಲಿಸಿದರು.

ಸಮಿತಿ ಸದಸ್ಯರಾಗಿದ್ದ ತೃಣಮೂಲ ಕಾಂಗ್ರೆಸ್‌ ಪಕ್ಷದ ಸಂಸದರು, ಸಮಿತಿಯ ಕಾರ್ಯನಿರ್ವಹಣೆ ಶೈಲಿಯನ್ನೇ ಪ್ರಶ್ನಿಸಿದರು. ‘ಸಮಿತಿ ತರಾತುರಿಯಲ್ಲಿ ವರದಿ ಅಂತಿಮಗೊಳಿಸಿದೆ. ವಿಷಯ ಮಂಡನೆಗೆ ಅವಕಾಶವನ್ನೇ ನೀಡಲಿಲ್ಲ’ ಎಂದು ಹೇಳಿದ್ದಾರೆ.

ಹಲವು ಬಾರಿ ಸಭೆ ನಡೆದರೂ ಕೋವಿಡ್‌ ಸ್ಥಿತಿಯಿಂದಾಗಿ ಹಾಜರಾಗಲು ಆಗಿರಲಿಲ್ಲ ಎಂದು ತೃಣಮೂಲ ಕಾಂಗ್ರೆಸ್‌ನ ಓಬ್ರಿಯಾನ್‌ ಮತ್ತು ಮೊಹುವಾ ಮೊಯಿತ್ರಾ ಹೇಳಿದರು. ‘ವೈಯಕ್ತಿಕ ಮಾಹಿತಿ ಸುರಕ್ಷತೆ ಖಾತ್ರಿ ಇಲ್ಲದ ಕಾರಣ ನಾವು ವಿರೋಧಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.