ನವದೆಹಲಿ: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರಿ ಹೆಗ್ಗಳಿಕೆಯಿಂದ ಹೇಳಿಕೊಳ್ಳುವ ಸ್ನೇಹ’ವು ‘ಟೊಳ್ಳು’ ಎಂಬುದು ಸಾಬೀತಾಗುತ್ತಿದೆ’ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ. ಈ ಬಗ್ಗೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಭಾರತದ ವಿದೇಶಾಂಗ ನೀತಿಯು ವಿಫಲಗೊಂಡಿದೆ. ಕಳೆದ ಎರಡು ತಿಂಗಳಲ್ಲಿ ಇದು ವಿಧಿತವಾಗಿದೆ. ಇದಕ್ಕೆ ನಾಲ್ಕು ಉದಾಹರಣೆಗಳನ್ನೂ ನೀಡಬಹುದು. ಪ್ರಧಾನಿ ಮೋದಿ ಅವರ ಬಾಲಬಡುಕರು ಹೇಳುವ ಎಲ್ಲ ಅತಿಶಯೋಕ್ತಿಯ ಮಾತುಗಳಲ್ಲಿನ ಬಣ್ಣವನ್ನು ಈ ನಾಲ್ಕು ಸತ್ಯಗಳು ಬಹಿರಂಗ ಮಾಡುತ್ತವೆ’ ಎಂದಿದ್ದಾರೆ.
1. ‘ನಾನು ಮಧ್ಯಪ್ರವೇಶಿಸಿ ಆಪರೇಷನ್ ಸಿಂಧೂರವನ್ನು ನಿಲ್ಲಿಸಿದೆ. ಕಾರ್ಯಾಚರಣೆ ನಿಲ್ಲಿಸದೇ ಇದ್ದಲ್ಲಿ ನಾವು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಬೆದರಿಸಿದ್ದೆ’ ಎಂದು ಟ್ರಂಪ್ ಅವರು 2025ರ ಮೇ 10ರಿಂದ ಇಲ್ಲಿಯವರೆಗೆ 25 ಬಾರಿ ಹೇಳಿದ್ದಾರೆ
2. ‘ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನವು ಅಮೆರಿಕದ ಅದ್ಬುತ ಭಾಗೀದಾರ’ ಎಂದು 2025ರ ಜೂನ್ 10ರಂದು ಅಮೆರಿಕದ ಸೇನಾ ಕಮಾಂಡರ್ ಮೈಕಲ್ ಕುರೆಲಾ ಅವರು ಪಾಕಿಸ್ತಾನವನ್ನು ಶ್ಲಾಘಿಸಿದ್ದಾರೆ
3. ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರೊಂದಿಗೆ 2025ರ ಜೂನ್ 18ರಂದು ಟ್ರಂಪ್ ಅವರು ಉಪಾಹಾರ ಸೇವಿಸಿದರು
4. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಶುಕ್ರವಾರವಷ್ಟೇ ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಅವರನ್ನು ಭೇಟಿಯಾಗಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾಗೀದಾರನಾಗಿದ್ದಕ್ಕಾಗಿ ಪಾಕಿಸ್ತಾನಕ್ಕೆ ರುಬಿಯೊ ಅವರು ಧನ್ಯವಾದ ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.