ನವದೆಹಲಿ: ಶಾಂಘೈ ಸಹಕಾರ ಸಂಘಟನೆಯ(ಎಸ್‌ಸಿಒ) ರಕ್ಷಣಾ ಮಂತ್ರಿಗಳ ಸಭೆ ನಂತರ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆಯಲ್ಲಿ ಭಯೋತ್ಪಾದನೆ ಕುರಿತಂತೆ ಉಲ್ಲೇಖವೇ ಇಲ್ಲ. ಹೀಗಾಗಿ, ಇಂತಹ ಹೇಳಿಕೆಯನ್ನು ಭಾರತ ಒಪ್ಪುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಶುಕ್ರವಾರ ಹೇಳಿದ್ದಾರೆ.
‘ಭಯೋತ್ಪಾದನೆ ಕುರಿತ ಉಲ್ಲೇಖ ಇರುವ ಹೇಳಿಕೆಯು ಸಂಘಟನೆಯ ಒಂದು ಸದಸ್ಯ ರಾಷ್ಟ್ರಕ್ಕೆ ಒಪ್ಪಿಗೆಯಾಗುತ್ತಿಲ್ಲ’ ಎಂದು ಅವರು ಪರೋಕ್ಷವಾಗಿ ಪಾಕಿಸ್ತಾನವನ್ನು ಕುಟುಕಿದ್ದಾರೆ.
‘ಭಯೋತ್ಪಾದನೆ ವಿರುದ್ಧದ ಹೋರಾಟವೇ ಶಾಂಘೈ ಸಹಕಾರ ಸಂಘಟನೆಯ ಮುಖ್ಯ ಉದ್ಧೇಶ. ಭಯೋತ್ಪಾದನೆ ಕುರಿತಂತೆ ಭಾರತದ ಆತಂಕಗಳನ್ನು ಎಸ್‌ಸಿಒ ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ, ಈ ವಿಚಾರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೆಗೆದುಕೊಂಡ ನಿಲುವು ಸರಿಯಾಗಿಯೇ ಇದೆ’ ಎಂದು ಅವರು ಹೇಳಿದ್ದಾರೆ.
ಸಭೆ ನಂತರ, ಎಸ್‌ಸಿಒ ಗುರುವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿತ್ತು. ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಪ್ರಸ್ತಾಪ ಇಲ್ಲದಿರುವುದು ಹಾಗೂ ಪಾಕಿಸ್ತಾನ ಬೆಂಬಲಿತ ಗಡಿಯಾಚೆಯ ಭಯೋತ್ಪಾದನೆ ಕುರಿತ ಭಾರತದ ಕಳವಳವನ್ನು ಒಪ್ಪಿಕೊಳ್ಳದ ಧೋರಣೆ ಖಂಡಿಸಿ, ಜಂಟಿ ಹೇಳಿಕೆಗೆ ಸಹಿ ಹಾಕಲು ರಾಜನಾಥ್ ಸಿಂಗ್ ನಿರಾಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.