ತಮಿಳುನಾಡಿನ ಮಧುರೈ ಜಿಲ್ಲೆಯ ಅಲಂಗನಲ್ಲೂರಿನಲ್ಲಿ ‘ಪೊಂಗಲ್’ ಆಚರಣೆಯ ಅಂಗವಾಗಿ ಗುರುವಾರ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜನರು ಗೂಳಿ ಪಳಗಿಸಲು ಪ್ರಯತ್ನಿಸಿದರು
– ಪಿಟಿಐ ಚಿತ್ರ
ಚೆನ್ನೈ: ತಮಿಳುನಾಡಿನಲ್ಲಿ ಕಾಣುಂ ಪೊಂಗಲ್ ದಿನ ನಡೆದ ಜಲ್ಲಿಕಟ್ಟು, ಮಂಜುವಿರಾಟ್ಟು ಸ್ಪರ್ಧೆಗಳಲ್ಲಿ ಏಳು ಜನರು ಸಾವಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮೃತರಲ್ಲಿ ಬಹುತೇಕರು ಪ್ರೇಕ್ಷಕರು ಮತ್ತು ಗೂಳಿಗಳ ಮಾಲೀಕರು. ಪ್ರತ್ಯೇಕ ಘಟನೆಗಳಲ್ಲಿ ಎರಡು ಗೂಳಿಗಳೂ ಮೃತಪಟ್ಟಿವೆ. ಪುದುಕ್ಕೊಟ್ಟೈನಲ್ಲಿ ನಡೆದ ಸ್ಪರ್ಧೆ ವೇಳೆ ಒಂದು ಗೂಳಿ ಸತ್ತರೆ, ಶಿವಗಂಗೆಯ ಸಿರವಯಲ್ ಮಂಜುವಿರಟ್ಟುವಿನಲ್ಲಿ ಗೂಳಿ ಮತ್ತು ಅದರ ಮಾಲೀಕ ಸತ್ತಿದ್ದಾರೆ.
ಶಿವಗಂಗಾ ಜಿಲ್ಲೆಯ ಸಿರವಯಲ್‌ನಲ್ಲಿನ ಮಂಜುವಿರಟ್ಟು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಡುವಿಕೊಟ್ಟೈ ಕೀಲ ಆವಂಧಿಪಟ್ಟಿ ಗ್ರಾಮದ ಥನೀಶ್‌ರಾಜ ಎಂಬವರು ಗೂಳಿ ತಂದಿದ್ದರು. ಅದು ಕಣದಿಂದ ಓಡಿಹೋಗಿ ಹತ್ತಿರದಲ್ಲಿನ ಕೃಷಿ ಬಾವಿಗೆ ಬಿದ್ದಿತು. ಆ ಗೂಳಿಯನ್ನು ಹಿಡಿಯಲು ಯತ್ನಿಸಿದ ಅದರ ಮಾಲೀಕ ಥನೀಶ್‌ರಾಜ ಕೂಡ ಬಾವಿಗೆ ಬಿದ್ದು, ಗೂಳಿ ಸಹಿತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗೂಳಿ ಪಳಗಿಸುವ ಮಂಜುವಿರಟ್ಟು ಸ್ಪರ್ಧೆಯಲ್ಲಿ 250 ಗೂಳಿಗಳು ಮತ್ತು 150 ಮಂದಿ ಗೂಳಿ ಪಳಗಿಸುವವರು ಭಾಗವಹಿಸಿದ್ದರು. ಇದರಲ್ಲಿ 130 ಮಂದಿ ಗಾಯಗೊಂಡಿದ್ದಾರೆ. ದೇವಕೋಟೆಯ ಪ್ರೇಕ್ಷಕ ಸುಬ್ಬಯ್ಯ ಎಂಬಾತನನ್ನು ಗೂಳಿ ತುಳಿದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆ ವ್ಯಕ್ತಿ ಮೃತಪಟ್ಟಿದ್ದಾರೆ.
ಮಧುರೈನ ಅಲಂಗನಲ್ಲೂರಿನಲ್ಲಿ ನಡೆದ ಸ್ಪರ್ಧೆ ವೇಳೆ ಕೆರಳಿದ ಗೂಳಿಯೊಂದು ಮೆಟ್ಟುಪಟ್ಟಿ ಗ್ರಾಮದ 55 ವರ್ಷದ ಪ್ರೇಕ್ಷಕ ಪಿ. ಪೆರಿಯಸಾಮಿ ಎಂಬವರ ಕುತ್ತಿಗೆಗೆ ಕೊಂಬಿನಿಂದ ಇರಿದಿದೆ. ಆ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸ್ಪರ್ಧೆ ವೇಳೆ ಸುಮಾರು 70 ಜನರು ಗಾಯಗೊಂಡಿದ್ದು, ಇವರಲ್ಲಿ ಬಹುತೇಕರು ಪ್ರೇಕ್ಷಕರು ಎಂದು ಪೊಲೀಸರು ತಿಳಿಸಿದ್ದಾರೆ.
ತಿರುಚಿರಾಪಳ್ಳಿ, ಕರೂರ್ ಮತ್ತು ಪುದುಕೊಟ್ಟೈ ಜಿಲ್ಲೆಗಳಲ್ಲಿ ನಡೆದ ನಾಲ್ಕು ಪ್ರತ್ಯೇಕ ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ ಇಬ್ಬರು ಪ್ರೇಕ್ಷಕರು ಮೃತಪಟ್ಟಿದ್ದಾರೆ. ಗೂಳಿ ಮಾಲೀಕರು ಮತ್ತು ಗೂಳಿ ಪಳಗಿಸುವವರು ಸೇರಿದಂತೆ 148 ಜನರು ಗಾಯಗೊಂಡಿದ್ದಾರೆ.
ಕೃಷ್ಣಗಿರಿ ಜಿಲ್ಲೆಯ ಬಸ್ತಲಪಲ್ಲಿಯಲ್ಲಿ ನಡೆದ ‘ಎರುತ್ತು ವಿದುಂ ವಿಳಾ’ ಸ್ಪರ್ಧೆಯಲ್ಲಿ 30 ವರ್ಷದ ವ್ಯಕ್ತಿ ಮತ್ತು ಸೇಲಂ ಜಿಲ್ಲೆಯ ಸೆಂತಾರಪಟ್ಟಿಯಲ್ಲಿ ಗೂಳಿ ದಾಳಿಗೆ 45 ವರ್ಷದ ವ್ಯಕ್ತಿ ಸತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.