ADVERTISEMENT

ಜಮಾತ್-ಇ-ಇಸ್ಲಾಮಿ–ಆರೆಸ್ಸೆಸ್‌ ಮಾತುಕತೆ: ಸಿಪಿಎಂ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 16:22 IST
Last Updated 21 ಫೆಬ್ರುವರಿ 2023, 16:22 IST
   

ಕಾಸರಗೋಡು (ಕೇರಳ) (ಪಿಟಿಐ): ಯುಡಿಎಫ್‌ ನೇತೃತ್ವದಲ್ಲಿ ಆರೆಸ್ಸೆಸ್‌ ಮತ್ತು ಜಮಾತ್-ಇ-ಇಸ್ಲಾಮಿ ಸಂಘಟನೆ ಮಾತುಕತೆ ನಡೆಸಿರುವುದಕ್ಕೆ ಆಡಳಿತಾರೂಢ ಸಿಪಿಎಂ ಮತ್ತಷ್ಟು ವಾಗ್ದಾಳಿ ಮುಂದುವರಿಸಿದೆ. ಇಂತಹ ಸಖ್ಯದಿಂದ ಸಾರ್ವಜನಿಕರಿಗೆ ಉಪಯೋಗವೇನೆಂಬುದನ್ನು ಸ್ಪಷ್ಟಪಡಿಸುವಂತೆ ಜಮಾತ್-ಇ-ಇಸ್ಲಾಮಿ ಸಂಘಟನೆಯನ್ನು ಅದು ಮಂಗಳವಾರ ಒತ್ತಾಯಿಸಿದೆ.

ಸೋಮವಾರ ಇಲ್ಲಿ ಆರಂಭವಾದ ಸಿಪಿಎಂ ನೇತೃತ್ವದ ರಾಜ್ಯವ್ಯಾಪಿ ಜನರ ರಕ್ಷಣಾ ರ‍್ಯಾಲಿಯ ವೇಳೆ ವರದಿಗಾರರೊಂದಿಗೆ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ಬಿ. ಗೋವಿಂದನ್‌ ಅವರು, ‘ಎಡ ಪಕ್ಷವು ಇಸ್ಲಾಮೊಫೋಬಿಯಾ ಹರಡುತ್ತಿದೆ ಎಂದು ಉದ್ದೇಶಪೂರ್ವಕ ಆರೋಪ ಹೊರಿಸಲಾಗುತ್ತಿದೆ. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಜಮಾತ್-ಇ-ಇಸ್ಲಾಮಿ ತಮ್ಮ ನಿಲುವು ಮರೆಮಾಚಿಕೊಳ್ಳಲು ಮಾಡುತ್ತಿರುವ ತಂತ್ರ’ ಎಂದು ಟೀಕಿಸಿದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಜಮಾತ್-ಇ-ಇಸ್ಲಾಮಿ ಮತ್ತು ಆರೆಸ್ಸೆಸ್‌ ನಡುವಿನ ಮಾತುಕತೆ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ವಾಗ್ದಾಳಿ ನಡೆಸಿದ ಮರು ದಿನವೇ ಪಕ್ಷದ ರಾಜ್ಯ ಕಾರ್ಯದರ್ಶಿಯೂ ಟೀಕಾ ಪ್ರಹಾರ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.