ADVERTISEMENT

ಜಾಮಿಯಾ ಬಳಿ ಗುಂಡಿನ ದಾಳಿ: ಅನುರಾಗ್ ಠಾಕೂರ್ ವಿರುದ್ಧ ಸಿಡಿದೆದ್ದ ಟ್ವೀಟಿಗರು

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 15:41 IST
Last Updated 30 ಜನವರಿ 2020, 15:41 IST
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್   

ಬೆಂಗಳೂರು: ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈತಹಾರಿಸಿದಗುಂಡು ತಾಕಿ ಪ್ರತಿಭಟನಕಾರರೊಬ್ಬರಿಗೆ ಗಾಯವಾಗಿದೆ.

ಕೈಯಲ್ಲಿ ಪಿಸ್ತೂಲ್ ಹಿಡಿದು ಸಿಎಎ ಪರ ಘೋಷಣೆ ಕೂಗಿದ್ದ ದಾಳಿಕೋರ 'ಸ್ವಾತಂತ್ಯ ತಗೊಳ್ಳಿ' ಎಂದು ಪ್ರತಿಭಟನಕಾರರತ್ತ ಗುಂಡುಹಾರಿಸಿದ್ದನು. ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಈತ ರಾಮ್‌ಭಕ್ತ್ ಗೋಪಾಲ್ ಎಂದು ಗುರುತಿಸಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ದೆಹಲಿ ಚುನಾವಣಾ ಪ್ರಚಾರದಲ್ಲಿ ಹಣಕಾಸು ಖಾತೆ ರಾಜ್ಯಸಚಿವ ಅನುರಾಗ್ ಸಿಂಗ್ ಠಾಕೂರ್ ಪ್ರಚೋದನಕಾರಿ ಘೋಷಣೆ ಕೂಗಿದ್ದರು. ಠಾಕೂರ್ ಅವರು ಚಪ್ಪಾಳೆ ತಟ್ಟುತ್ತಾ ‘ದೇಶದ್ರೋಹಿಗಳನ್ನು’ ಎಂದು ಕೂಗಿದಾಗ, ನೆರೆದಿದ್ದ ಜನರು ‘ಗುಂಡಿಕ್ಕಿ’ ಎಂದು ಪ್ರತಿಕ್ರಿಯಿಸುತ್ತಾರೆ. ಮತ್ತೊಬ್ಬ ಹಿರಿಯ ಸಚಿವ ಗಿರಿರಾಜ್ ಸಿಂಗ್ ಅವರು ಸಹ ಈ ವೇಳೆ ಸ್ಥಳದಲ್ಲಿದ್ದರು.

ಠಾಕೂರ್ ಅವರ ಭಾಷಣದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ಮೂರು ದಿನಗಳ ಕಾಲ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿದೆ.


#ArrestAnuragThakur ಟ್ರೆಂಡಿಂಗ್

ಕೇಂದ್ರ ಸಚಿವ ಅನುರಾಗ್ ಠಾಕೂರ್, ದೇಶದ್ರೋಹಿಗಳನ್ನುಗುಂಡಿಕ್ಕಿ ಕೊಲ್ಲಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಜಾಮಿಯಾ ಬಳಿ ವ್ಯಕ್ತಿಯೊಬ್ಬ ಸಿಎಎ ವಿರೋಧಿ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ್ದಾನೆ. ಇದಕ್ಕೆಲ್ಲ ಕಾರಣ ಅನುರಾಗ್ ಠಾಕೂರ್, ಅವರನ್ನು ಬಂಧಿಸಿ ಎಂದು ನೆಟ್ಟಿಗರು ಒತ್ತಾಯಿಸಿದ್ದು ಟ್ವಿಟರ್‌ನಲ್ಲಿ #ArrestAnuragThakur ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.