ADVERTISEMENT

ಪೊಲೀಸರಿಂದಲೇ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಡಿ. 15ರಂದು ನಡೆದಿದ್ದ ದಾಂದಲೆ: ಜಾಮಿಯಾ ಸಮಿತಿಯಿಂದ ವಿಡಿಯೊ ಬಿಡುಗಡೆ

ಪಿಟಿಐ
Published 16 ಫೆಬ್ರುವರಿ 2020, 19:30 IST
Last Updated 16 ಫೆಬ್ರುವರಿ 2020, 19:30 IST
.
.   

ನವದೆಹಲಿ: ಕಳೆದ ವರ್ಷ ಡಿಸೆಂಬರ್‌ 15ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂಘರ್ಷದ ವಿಡಿಯೊವೊಂದನ್ನು ಜಾಮಿಯಾ ಸಮನ್ವಯ ಸಮಿತಿ ಭಾನುವಾರ ಬಿಡುಗಡೆ ಮಾಡಿದೆ. ಅರೆಸೇನಾ ಪಡೆ ಮತ್ತು ಪೊಲೀಸ್‌ ಸಿಬ್ಬಂದಿಯು ವಿದ್ಯಾರ್ಥಿಗಳನ್ನು ಲಾಠಿಯಿಂದ ಥಳಿಸುವ ದೃಶ್ಯಗಳು ಈ ವಿಡಿಯೊದಲ್ಲಿ ಇವೆ.

ಅರೆಸೇನಾ ಪಡೆ ಮತ್ತು ಪೊಲೀಸ್‌ ಇಲಾಖೆಯ ಏಳೆಂಟು ಸಿಬ್ಬಂದಿ ಜಾಮಿಯಾ ವಿ.ವಿ.ಯ ಓಲ್ಡ್‌ ರೀಡಿಂಗ್‌ ಹಾಲ್‌ ಪ್ರವೇಶಿಸಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಥಳಿಸುತ್ತಿರುವ ದೃಶ್ಯ 48 ಸೆಕೆಂಡ್‌ನ ವಿಡಿಯೊದಲ್ಲಿ ಇದೆ.

ಈ ವಿಡಿಯೊದ ಬಗ್ಗೆ ಮಾಹಿತಿ ಇದೆ. ಜಾಮಿಯಾ ವಿ.ವಿ.ಯ ಸಂಘರ್ಷದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಈ ತನಿಖೆಯ ಭಾಗವಾಗಿ ವಿಡಿಯೊದ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ವಿಶೇಷ ಪೊಲೀಸ್‌ ಆಯುಕ್ತ (ಗುಪ್ತಚರ ವಿಭಾಗ) ಪ್ರವೀಣ್‌ ರಂಜನ್‌ ಹೇಳಿದ್ದಾರೆ.

ADVERTISEMENT

ಕಳೆದ ಡಿ. 15ರಂದು ವಿ.ವಿ.ಯಲ್ಲಿ ಭಾರಿ ಘರ್ಷಣೆ ನಡೆದಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ವಿ.ವಿ.ಯ ಆವರಣದಿಂದ ಸ್ವಲ್ಪ ದೂರದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ದುಷ್ಕರ್ಮಿಗಳು ವಿ.ವಿ.ಯೊಳಗೆ ನುಗ್ಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಪೊಲೀಸರು ವಿವಿಗೆ ಪ್ರವೇಶಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪೊಲೀಸರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿಶ್ವವಿದ್ಯಾಲಯದ ಆಡಳಿತದ ಅನುಮತಿ ಇಲ್ಲದೆಯೇ ಪೊಲೀಸರು ಒಳ ಪ್ರವೇಶಿಸಿ, ದಾಂದಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಆರೋಪಿಸಿದ್ದರು.

‘ವಿ.ವಿ. ವಿದ್ಯಾರ್ಥಿಗಳ ಮೇಲೆ ಪೊಲೀಸ್‌ ದೌರ್ಜನ್ಯಕ್ಕೆ ಸಂಬಂಧಿಸಿ ಅಮಿತ್‌ ಶಾ ಹೇಳಿದ್ದೆಲ್ಲವು ಸುಳ್ಳು, ದಾರಿತಪ್ಪಿಸುವ ಮತ್ತು ರಾಜಕೀಯ ಉದ್ದೇಶದ ಹೇಳಿಕೆಗಳು’
–ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

‘ವಿಡಿಯೊ ನೋಡಿ ಆಘಾತವಾಗಿಲ್ಲ. ವಿದ್ಯಾರ್ಥಿಗಳು ತಾವು ಅನುಭವಿಸಿದ ನೋವನ್ನು ತಿಂಗಳಿನಿಂದ ಹೇಳುತ್ತಿದ್ದರು. ಅವರನ್ನು ಅನುಮಾನಿಸಿದವರ ಆತ್ಮಸಾಕ್ಷಿಯ ಬಗ್ಗೆ ನಾಚಿಕೆ ಅನಿಸುತ್ತಿದೆ ‘

–ಆಯಿಷಿ ಘೋಷ್‌, ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.