ADVERTISEMENT

ಜಾಮಿಯಾ ನಗರ ಹಿಂಸಾಚಾರ: 11 ಆರೋಪಿಗಳು ಖುಲಾಸೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 15:57 IST
Last Updated 4 ಫೆಬ್ರುವರಿ 2023, 15:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಾಮಿಯಾ ನಗರ ಹಿಂಸಾಚಾರ ಪ್ರಕರಣದಲ್ಲಿ ವಿದ್ಯಾರ್ಥಿ ಕಾರ್ಯಕರ್ತರಾದ ಶರ್ಜೀಲ್ ಇಮಾಮ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಸೇರಿದಂತೆ 11 ಜನರನ್ನು ದೆಹಲಿ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ. ಪೊಲೀಸರು ಅವರನ್ನು ಬಲಿಪಶುಗಳನ್ನಾಗಿಸಿದ್ದರು ಎಂದು ಹೇಳಿದೆ.

ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಇಲ್ಯಾಸ್ ವಿರುದ್ಧದ ಆರೋಪ‍ಟ್ಟಿ ಸಿದ್ದಪಡಿಸಲು ನ್ಯಾಯಾಲಯ ಆದೇಶಿಸಿದೆ.

2019ರ ಡಿಸೆಂಬರ್‌ನಲ್ಲಿ ಜಾಮಿಯಾ ನಗರ ಪ್ರದೇಶದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.

ADVERTISEMENT

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರುಳ್ ವರ್ಮಾ, ‘ಕೃತ್ಯಕ್ಕೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ ಎಂಬ ತೀರ್ಮಾನಕ್ಕೆ ಬರದೆ ಇರಲು ಸಾಧ್ಯವಿಲ್ಲ. ಆದರೆ, ಇವರನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆ ’ ಎಂದು ಹೇಳಿದರು.

‘ಸ್ಥಳದಲ್ಲಿ ಹಲವಾರು ಪ್ರತಿಭಟನಕಾರರು ಇದ್ದರು. ಗುಂಪಿನೊಳಗೆ ಕೆಲ ಕಿಡಿಗೇಡಿಗಳು ಕೆಟ್ಟ ವಾತಾವರಣವನ್ನು ಸೃಷ್ಟಿಸಿರಬಹುದು. ಆರೋಪಿಗಳು ಗಲಭೆಯಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆಯೇ ಎಂಬುದು ಚರ್ಚಾಸ್ಪದ ಪ್ರಶ್ನೆಯಾಗಿ ಉಳಿದಿದೆ. ಉತ್ತರ ಒಕ್ಕೊರಲಿನಿಂದ ಇಲ್ಲ ಎಂದೇ ಆಗುತ್ತದೆ’ ಎಂದು ಅವರು ಹೇಳಿದರು.

ಭಿನ್ನಮತ ಮತ್ತು ದಂಗೆಯ ನಡುವಿನ ವ್ಯತ್ಯಾಸವನ್ನು ತನಿಖಾ ಸಂಸ್ಥೆಗಳು ಗ್ರಹಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.